1500 ಎಕರೆಗೆ ನೀರು ಪೂರೈಸುವ ಸಾಮರ್ಥ್ಯ I ರೈತರ ಮೊಗದಲ್ಲಿ ಹರ್ಷ
ಮಾಯಕೊಂಡ: ತುಂಬಿ ತುಳುಕುತ್ತಿದ್ದ ಮಾಯಕೊಂಡ ಸಮೀಪದ ಹುಚ್ಚವ್ವನಹಳ್ಳಿ ಕೆರೆ ಮಂಗಳವಾರ ರಾತ್ರಿ ಸುರಿದ ಮಳೆಗೆ ಕೋಡಿ ಬಿದ್ದಿದ್ದು ರೈತರ ಮೊಗದಲ್ಲಿ ಹರ್ಷ ಮೂಡಿದೆ.
ಅಂದಾಜು 150 ಎಕರೆಗಿಂತ ಹೆಚ್ಚು ವಿಸ್ತೀರ್ಣದ ಹುಚ್ಚವನಹಳ್ಳಿ ಕೆರೆ, 1500 ಎಕರೆ ಜಮೀನಿಗೆ ನೀರುಣಿಸುವ ಸಾಮರ್ಥ್ಯ ಹೊಂದಿದೆ. ಹುಚ್ಚವ್ವನಹಳ್ಳಿ, ಎಚ್. ಬಸವಾಪುರ, ವಡ್ಡರಹಟ್ಟಿ, ಹೆದ್ನೆ, ರಾಂಪುರ, ಕ್ಯಾತನಹಳ್ಳಿ, ಇಂಡಸಕಟ್ಟೆ, ನಲ್ಕುಂದ, ಮಾಯಾಕೊಂಡ ಮತ್ತಿತರ ಗ್ರಾಮಗಳ ಕೊಳವೆಬಾವಿಗಳ ಅಂತರ್ಜಲ ಅಭಿವೃದ್ಧಿಗೆ ಅನುಕೂಲವಾಗಿದೆ ಎನ್ನುತ್ತಾರೆ ರೈತರು.
ಹುಚ್ಚವ್ವನಹಳ್ಳಿ ಕೆರೆ ಗ್ರಾಮದಿಂದ ಪೂರ್ವಭಿಮುಖವಾಗಿ 3 ಕಿ.ಮೀ. ದೂರದಲ್ಲಿದ್ದು, ಎರಡು ಗುಡ್ಡಗಳ ನಡುವೆ ಜಲಾಶಯದಂತೆ ಕಂಗೊಳಿಸುತ್ತದೆ. ಸಮೀಪದಲ್ಲಿ ಸಾಮಾಜಿಕ ಹಾಗೂ ಮೀಸಲು ಅರಣ್ಯ ಪ್ರದೇಶಗಳಿದ್ದು, ಈ ಅರಣ್ಯ ಪ್ರದೇಶಗಳಲ್ಲಿ ಕೆರೆಗೆ ನೀರಿನ ಒಳಹರಿವಿನ ಹಲವು ಹಳ್ಳಗಳಿವೆ. ಗುಡ್ಡಕ್ಕೆ ಮಳೆ ಸುರಿದರೆ ಹಳ್ಳಗಳ ಮೂಲಕ ನೀರು ಕೆರೆ ಸೇರುತ್ತದೆ.
ಮಾಯಕೊಂಡ ಹೋಬಳಿಯ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿರುವ ಬಹುವಾರ್ಷಿಕ ಅಡಕೆ ಬೆಳೆಗೆ ನೀರುಣಿಸುವ ಕೊಳವೆಬಾವಿಗಳ ಅಂತರ್ಜಲ ಅಭಿವೃದ್ಧಿಗೆ ಕೆರೆ ತುಂಬಿ ಕೋಡಿ ಬಿದ್ದಿರುವುದು ಅನುಕೂಲವಾಗಿದೆ.
ಕೋಡಿಯ ಮೂಲಕ ಹೊರ ಹೋಗುವ ನೀರು ಹಳ್ಳಗಳ ಮೂಲಕವೇ ಹರಿದು ಹೋಗುತ್ತಿದ್ದು, ಬೆಳೆ ಹಾನಿ ಸಂಭವಿಸಿಲ್ಲ. ಕೆರೆಯ ತೂಬು ಬಂದ್ ಮಾಡಿರುವುದರಿಂದ ಕೆರೆಯಲ್ಲಿ ನಾಲ್ಕೈದು ವರ್ಷಗಳವರೆಗೂ ನೀರು ನಿಲ್ಲಬಹುದು.
ವಿಜಯದಶಮಿ ಹಬ್ಬದ ನಂತರ ತುಂಬಿದ ಕೆರೆಗೆ ಗಂಗಾಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹುಚ್ಚವ್ವನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಜಿ. ರುದ್ರೇಶ್, ಆರ್.ಸಿ. ಗಣೇಶ್, ಉಪಾಧ್ಯಕ್ಷ ಕೆ.ಜಿ. ಸತೀಶ್, ಸದಸ್ಯರಾದ ಎನ್.ಬಿ. ಮಹೇಶ್, ವಿ.ಎಚ್. ಲತಾ ತಿಳಿಸಿದ್ದಾರೆ.