‘ಪವರ್ಸ್ಟಾರ್’ ಪುನೀತ್ ರಾಜ್ಕುಮಾರ್ ಅವರ ‘ಪಿಆರ್ಕೆ ಪ್ರೊಡಕ್ಷನ್ಸ್’ ಬ್ಯಾನರ್ನಲ್ಲಿ ಮೂಡಿಬರುತ್ತಿರುವ ‘ಮಾಯಾಬಜಾರ್’ ಸಿನಿಮಾದ ಪ್ರಪ್ರಥಮ ಲಿರಿಕಲ್ ವಿಡಿಯೊ ಜ. 17ರಂದು ಬಿಡುಗಡೆ ಆಗಲಿದೆ. ವಿಶೇಷವೆಂದರೆ ಈ ಮೂಲಕ ಇದೇ ಮೊದಲ ಸಲ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಗಾಯನ ಮತ್ತು ಪುನೀತ್ ರಾಜ್ಕುಮಾರ್ ಅವರ ನರ್ತನ ಸಮ್ಮಿಲನ ಆಗಲಿದೆ. ಅರ್ಥಾತ್, ‘ಮಾಯಾಬಜಾರ್’ನಲ್ಲಿನ ಈ ವಿಶೇಷ ಗೀತೆಯನ್ನು ಎಸ್ಪಿಬಿ ಹಾಡಿದ್ದು, ಪುನೀತ್ ಅದಕ್ಕೆ ಹೆಜ್ಜೆ ಹಾಕಿದ್ದಾರೆ.
ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ಎಂ.ಗೋವಿಂದ ಅವರ ನಿರ್ವಣದಲ್ಲಿ ಮೂಡಿಬಂದಿರುವ ಈ ಸಿನಿಮಾಗೆ ರಾಧಾಕೃಷ್ಣ ರೆಡ್ಡಿ ಆಕ್ಷನ್-ಕಟ್ ಹೇಳುವ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ‘ಒಂದು ಮೊಟ್ಟೆಯ ಕಥೆ’ ಖ್ಯಾತಿಯ ರಾಜ್ ಬಿ. ಶೆಟ್ಟಿ, ವಷಿಷ್ಠ ಸಿಂಹ, ಪ್ರಕಾಶ್ ರಾಜ್, ಸುಧಾರಾಣಿ, ಚೈತ್ರಾ ರಾವ್ ಮತ್ತಿತರರು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಪುನೀತ್ ರಾಜ್ಕುಮಾರ್ ಅವರು ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
‘ಚಿತ್ರದ ಕೊನೆಯಲ್ಲಿ ಹಾಡೊಂದು ಬರುತ್ತದೆ. ಅದು ರೆಟ್ರೊ ಶೈಲಿಯಲ್ಲಿ ಇರುವುದರಿಂದ ಯಾರಿಂದ ಹಾಡಿಸುವುದು ಎಂದು ಯೋಚಿಸುತ್ತಿದ್ದಾಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರೇ ಸೂಕ್ತ ಎನಿಸಿತು. ಪುನೀತ್ ರಾಜ್ಕುಮಾರ್ ಅವರು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಿಂದೆ ಪುನೀತ್ ಅವರ ಸಿನಿಮಾವೊಂದರಲ್ಲಿ ಎಸ್ಪಿಬಿ ದನಿ ಹಿನ್ನೆಲೆಯಲ್ಲಿ ಕೇಳಿಬಂದಿತ್ತು. ಆದರೆ ಇಲ್ಲಿ ಈ ಹಾಡಿನ ಮೂಲಕ ಇದೇ ಮೊದಲ ಸಲ ಎಸ್ಪಿಬಿ ಗಾಯನ, ಅಪು್ಪ ಅವರ ಡ್ಯಾನ್ಸ್ ಸಿಂಕ್ ಆಗಿದೆ’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ರಾಧಾಕೃಷ್ಣ.
‘ಅದೇ ಹಾಡಿನ ಲಿರಿಕಲ್ ವೀಡಿಯೊ ಶುಕ್ರವಾರ ಬಿಡುಗಡೆ ಆಗಲಿದೆ. ಅದರಲ್ಲಿ ಪುನೀತ್ ಅವರು ಸ್ಟೆಪ್ ಹಾಕಿರುವ ಝುಲಕ್ ಇರಲಿದೆ. ಪೂರ್ತಿ ವೀಡಿಯೊ ಸಿನಿಮಾದಲ್ಲಷ್ಟೇ ಲಭ್ಯ’ ಎನ್ನುತ್ತಾರೆ ಅವರು. ಅಂದಹಾಗೆ ಸಿನಿಮಾ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.