ನರಗುಂದ: ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶಕ್ಕಾಗಿ ತಾಲೂಕಿನ ಬೆನಕನಕೊಪ್ಪ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿರುವ ಐದು ದಿನಗಳ ಮೇಧಾವಿ ವಿದ್ಯಾರ್ಥಿಗಳ ಪುನಶ್ಚೇತನ ವಸತಿ ಸಹಿತ ತರಬೇತಿ ಶಿಬಿರಕ್ಕೆ ಡಿಡಿಪಿಐ ಆರ್.ಎಸ್. ಬುರಡಿ ಸೋಮವಾರ ಚಾಲನೆ ನೀಡಿದರು.
‘ಪ್ರತಿ ವಿಷಯದಲ್ಲಿ ಅರ್ಥವಾಗದ ಟಾಪಿಕ್ಗಳನ್ನು ಪಟ್ಟಿ ಮಾಡಿ, ವಿಷಯ ಪರಿಣಿತರನ್ನು ಕೇಳಿ ತಿಳಿದುಕೊಳ್ಳಬೇಕು. ಪ್ರತಿ ವಿಷಯದಲ್ಲೂ ಸಂಪೂರ್ಣ ಅಂಕಗಳಿಸಿ ತಾಲೂಕಿಗೆ, ಜಿಲ್ಲೆಗೆ, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಕಲಿತ ಶಾಲೆ, ತಂದೆ, ತಾಯಿಗಳಿಗೆ ಕೀರ್ತಿ ತರಬೇಕು’ ಎಂದರು.
ಬಿಇಒ ಡಾ. ಗುರುನಾಥ ಹೂಗಾರ ಮಾತನಾಡಿ, ಶೇ. 95ರಷ್ಟು ಅಂಕ ಗಳಿಸುವ ಸಾಮರ್ಥ್ಯವಿರುವ ಮೇಧಾವಿ ವಿದ್ಯಾರ್ಥಿಗಳು ಇನ್ನುಳಿದ ಶೇ. 5 ಅಂಕ ಗಳಿಸಲು ಪ್ರಯತ್ನಿಸಿ ಸಂಪೂರ್ಣ ಶೇ. 100 ಯಶಸ್ಸು ಗಳಿಸಲು ಪ್ರಯತ್ನಿಸಬೇಕು. ಪರೀಕ್ಷೆಗಳನ್ನು ಆತ್ಮ ವಿಶ್ವಾಸದಿಂದ ಎದುರಿಸಬೇಕು ಎಂದರು. ಉತ್ತಮ ಫಲಿತಾಂಶಕ್ಕಾಗಿ ಪ್ರಕಟಿಸಿರುವ ಉತ್ತರ ಸಹಿತ ಪ್ರಶ್ನೆ ಪತ್ರಿಕೆ ಭಂಡಾರ, ಸಶಕ್ತ ಮಾರ್ಗದರ್ಶಿಯನು ಬಿಡುಗಡೆಗೊಳಿಸಲಾಯಿತು. ಮಾರ್ಗದರ್ಶಿ ಮುದ್ರಣಕ್ಕಾಗಿ ಸಹಕಾರ ನೀಡಿದ ವಿ.ಜಿ. ಮಮಟಗೇರಿ, ಶಂಕರಗೌಡ ನಾಯ್ಕರ ಅವರನ್ನು ಸನ್ಮಾನಿಸಲಾಯಿತು. ಗದಗ ಗ್ರಾಮೀಣ ಬಿಇಒ ವಿ.ವಿ. ನಡುವಿನಮನಿ, ಶಂಕರ ಹಡಗಲಿ, ಪಿ.ಸಿ.ಕಲಹಾಳ, ಜೆಡ್.ಎಂ. ಖಾಜಿ, ಎಸ್.ಎಲ್. ಮರಿಗೌಡರ, ಎಂ.ಆರ್. ನಾಯಕ, ರೂಪಾ ನಾಯ್ಡು, ಜಿ.ಎನ್. ದೊಡ್ಡಲಿಂಗಪ್ಪನವರ, ಬಿ.ಎ. ನದಾಫ, ಉಮೇಶ ಎಂ. ಉಪಸ್ಥಿತರಿದ್ದರು. ನಿತೀನ ಕೇಸರಕರ ಹಾಗೂ ಬಿ.ಎಫ್. ಮಜ್ಜಗಿ ನಿರ್ವಹಿಸಿದರು.