ಹನೂರು: ಸರ್ಕಾರ ಹಾಗೂ ದಾನಿಗಳಿಂದ ಸಿಗುವ ಸವಲತ್ತುಗಳನ್ನು ಪ್ರತಿಯೊಬ್ಬರೂ ಪಡೆದುಕೊಂಡು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಚಾಮರಾಜನಗರದ ಶ್ರೀರಾಮಶೇಷ ಪಾಠಶಾಲೆ ಪ್ರಾಂಶುಪಾಲ ಆರ್.ಪ್ರದೀಪ್‌ಕುಮಾರ್ ದೀಕ್ಷಿತ್ ಸಲಹೆ ನೀಡಿದರು.
ತಾಲೂಕಿನ ಗಡಿಯಂಚಿನ ಆಲಂಬಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಸೇವಾಮಿಲನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಹಾಗೂ ಪಠ್ಯೋಪಕರಣ ವಿತರಿಸಿ ಮಾತನಾಡಿದರು.
18 ವರ್ಷದಿಂದ ಶಾಲಾ ಮಕ್ಕಳಿಗೆ ಶ್ರೀರಾಮಶೇಷ ಪಾಠಶಾಲಾ ವತಿಯಿಂದ ಶೈಕ್ಷಣಿಕವಾಗಿ ಅನುಕೂಲ ಕಲ್ಪಿಸುತ್ತಿದೆ. ಹೆಚ್ಚಾಗಿ ಬಡ ವರ್ಗದ ಮಕ್ಕಳು ಶಿಕ್ಷಣ ಪಡೆಯುವ ಶಾಲೆಗಳನ್ನು ಗುರುತಿಸಿ ಈ ಕಾರ್ಯ ಮಾಡಲಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ಓದಿನ ಕಡೆ ಹೆಚ್ಚು ಆಸಕ್ತಿ ವಹಿಸುವ ಮೂಲಕ ಶೈಕ್ಷಣಿಕವಾಗಿ ಸಾಧನೆ ಮಾಡುವುದರತ್ತ ಗಮನಹರಿಸಬೇಕು. ಈ ದಿಸೆಯಲ್ಲಿ ಪಾಲಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
ಮುಖ್ಯ ಶಿಕ್ಷಕ ಜಯರಾಮ್, ಶಿಕ್ಷಕಿ ಕವಿತಾ, ಮುಖಂಡರಾದ ಪಾರ್ಥಸಾರಥಿ, ಪ್ರಕಾಶ್, ಮುನಿಯಪ್ಪ, ಬಿ.ಮಹದೇವ, ಶ್ರೀಕಂಠ, ಪುಟ್ಟಚಿಕ್ಕೆಗೌಡ, ಪ್ರಸಾದ್, ಅಮಿತ್, ಕಿಶೋರ್, ಪ್ರದೀಪ್, ಭರತ್ ಇತರರು ಇದ್ದರು.