More

    ನಂದಾ ದೀವಿಗೆಯಂತೆ ನಿರಂತರವಾಗಿರಲಿ ಭಗವನ್ನಾಮ ಸ್ಮರಣೆ

    | ಸ್ವಾಮಿ ಜಪಾನಂದ
    ಯಾವಾಗ ಭಗವನ್ನಾಮ ಸ್ಮರಣೆ ಮಾಡುವುದು? ಕೇವಲ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಅಥವಾ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿದಾಗಲೇ ಅಥವಾ ಯಾರಾದರೂ ಗುರುವರೇಣ್ಯರ ಬಳಿ ಸಾರಿದಾಗಲೇ ಅಥವಾ ದೇವರ ಕೋಣೆಗೆ ತೆರಳಿದ ಮೇಲೆಯೇ? ಹೀಗೆ ನಾನಾ ರೀತಿಯ ಪ್ರಶ್ನೆಗಳ ಸುರಿಮಳೆ ಏಕ ಪ್ರಕಾರವಾಗಿ ಮನುಷ್ಯನ ಮನಸ್ಸಿನಲ್ಲಿ ಏಳುವುದು ಸಹಜವೇ ಸರಿ. ಭಗವನ್ನಾಮ ಒಂದು ಕ್ಷಣ ಮರೆತರೂ ದುರಿತಗಳು ನಮ್ಮನ್ನು ಆವರಿಸಿಕೊಂಡು ಬಿಡುತ್ತದೆ. ಭಗವನ್ನಾಮ ಸ್ಮರಣೆ ಆಂತರ್ಯದ ಸ್ಪುರಣವನ್ನು ನೀಡುತ್ತದೆ. ಸದಾ ಎನ್ನ ನಾಲಿಗೆಯಲಿ ಬರಲಿ ರಾಮ ನಾಮ, ಬರಲಿ ಕೃಷ್ಣ ನಾಮ ಎಂದು ನಾಮಸ್ಮರಣೆಯ ಮಹಿಮೆಯನ್ನು ದಾಸರು ಕೊಂಡಾಡಿದ್ದಾರೆ. ಕುಲಶೇಖರ ಆಳ್ವಾರ್ ಅವರ ಈ ಸುಂದರ ಶ್ಲೋಕದ ಸಾಲುಗಳನ್ನು ನೋಡಿದಾಗ ಭಗವನ್ನಾಮದ ಶಕ್ತಿ, ಮಹಿಮೆಯನ್ನು ಅರಿತಂತಾಗುತ್ತದೆ- ‘ನಾಥೇತಿ ನಾಗಶಯನೇತಿ ಜಗನ್ನಿವಾಸೇತಿ, ಆಲಾಪಿನಂ ಪ್ರತಿಪದಂ ಕುರು ಮಾಂ’. ಮುಕುಂದ ಅನಾಥ ರಕ್ಷಕನೆಂದೂ ನಾಥನೆಂದೂ ನಾಗಶಯನನೆಂದೂ ಜಗನ್ನಿವಾಸನೆಂದೂ ನಾನು ಪ್ರತಿ ಕ್ಷಣ ಸ್ಮರಿಸುವ ಹಾಗೆ, ಕೊಂಡಾಡುವ ಹಾಗೆ ಮಾಡು. ಪ್ರತಿ ಕ್ಷಣ, ಪ್ರತಿ ಘಳಿಗೆ ಭಗವನ್ನಾಮ ಸ್ಮರಣೆ ಮಾಡುವಂತಾಗಲಿ ಎಂದು ಕರುಣಿಸು. ಬಹುಶಃ ಈ ಆಧುನಿಕ ಪ್ರಪಂಚದ ಆಸೆ, ಲಾಲಸೆಗಳ ಅಲೆಯಲ್ಲಿ ಸಿಲುಕಿದ ನತದೃಷ್ಟ ಮಾನವನಿಂದ ಇಂತಹ ಪ್ರಾರ್ಥನೆ, ಮೊರೆ ಕೇಳುವುದು ಖಂಡಿತಾ ದುರ್ಲಭ ಎನ್ನಬಹುದು. ಇದೇ ಧಾಟಿಯಲ್ಲಿ ಆಲೋಚಿಸಿದಾಗ ತಾಯಿ ಕುಂತಿದೇವಿ ಭಗವಾನ್ ಶ್ರೀಕೃಷ್ಣನಲ್ಲಿ ಪ್ರಾರ್ಥಿಸಿದ ರೀತಿಯನ್ನು ನೋಡಿದಾಗ ಎಂತಹವರೂ ನಾಚಿ ತಲೆತಗ್ಗಿಸುವಂತಾಗುತ್ತದೆ. ಧರ್ಮರಾಜ ಹಸ್ತಿನಾಪುರದ ಚಕ್ರವರ್ತಿಯಾಗಿ ತನ್ನ ಸಹೋದರರೊಂದಿಗೆ ಸಿಂಹಾಸನದ ಮೇಲೆ ವಿರಾಜಮಾನನಾಗಿದ್ದ ಪ್ರಸಂಗ. ಶ್ರೀಕೃಷ್ಣ ಅಲ್ಲಿ ಇರುವ ಸಂದರ್ಭದಲ್ಲಿ ತಾಯಿ ಕುಂತಿದೇವಿ ಭಗವಂತನಲ್ಲಿ ಈ ಪ್ರಾರ್ಥನೆ ಸಲ್ಲಿಸುತ್ತಾಳೆ.

    ವಿಪದಃ ಸಂತು ನಃ ಶಶ್ವತ್ ತತ್ರ ತತ್ರ ಜಗದ್ಗುರು|

    ಭವತೋ ದರ್ಶನಂ ಯಸ್ಯಾದ್ ಅಪುನರ್ಭವ ದರ್ಶನಂ ||

    (ಹೇ ಗೋವಿಂದಾ, ನಮ್ಮ ಜೀವನದಲ್ಲಿ ವಿಪತ್ತುಗಳು ಪದೇ ಪದೇ ಬರುತ್ತಿರಲಿ, ಏಕೆಂದರೆ ವಿಪತ್ತುಗಳಲ್ಲಿ ನಿಶ್ಚಿತವಾಗಿ ನಿನ್ನ ಅಪೂರ್ವ ದರ್ಶನ ದೊರೆಯುತ್ತಾ ಇರುತ್ತದೆ.)

    ಈ ಪ್ರಾರ್ಥನೆಯಲ್ಲಿ ಅದ್ಭುತವಾದ ಸತ್ಯಾಂಶ ತುಂಬಿದೆ. ಸುಖ, ಸಂತೋಷ, ಭೋಗ, ಲಾಲಸೆಗಳ ಮಧ್ಯೆ ಖಂಡಿತಾ ಮನುಷ್ಯ ದೇವರನ್ನು ನೆನೆಯು ವುದಿಲ್ಲ. ಒಂದು ವೇಳೆ ನೆನೆದು ಪೂಜಿಸಿದ ನೆಪ ಮಾಡಿದ್ದಾಗ್ಯೂ ಕೇವಲ ತೋರ್ಪಡಿಕೆ ಹಾಗೂ ತನ್ನ ಐಶ್ವರ್ಯದ ಪ್ರದರ್ಶನವಿದ್ದಂತಿರುತ್ತದೆ. ಆದರೆ ನಿಜವಾದ ಭಕ್ತ, ಸಾಧಕ, ಬಾಹ್ಯ ಸುಖಕ್ಕೆ ಮನಸ್ಸಿಡದೆ ಕೇವಲ ಆಂತರ್ಯದ ಪರಮಾನಂದವನ್ನು ಬಯಸುವವ, ಸುಖವನ್ನು ಅಪೇಕ್ಷಿಸುವುದಲ್ಲ, ಬದಲಾಗಿ ವಿಪತ್ತನ್ನೇ ಬಯಸುತ್ತಾನೆ. ಕಾರಣ ಆ ಸಮಯದಲ್ಲಿ ಭಗವಂತನ ದರ್ಶನ ಹಾಗೂ ಭಗವಂತನಲ್ಲಿ ಶರಣಾಗತಿ ಸಾಧ್ಯವಾಗುತ್ತದೆ ಎಂಬುದು ಜಗಜ್ಜಾಹೀರಾಗಿದೆ. ಸಾವಿರಾರು ಉದಾಹರಣೆಗಳನ್ನು ನೀಡಬಹುದು.

    ಭಗವಾನ್ ಶ್ರೀರಾಮಕೃಷ್ಣ ಪರಮಹಂಸರು ಈ ಭಗವನ್ನಾಮ ಸ್ಮರಣೆಯ ಬಗ್ಗೆ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ತಮ್ಮ ಬಳಿಗೆ ಸಾರಿದ ಸಾಧಕ ಭಕ್ತರಿಗೆ ವಿವರಿಸುತ್ತಿದ್ದರು. ಒಂದು ಸಂಭಾಷಣೆ ಹೀಗಿದೆ:

    ಶಿಷ್ಯ: ಕೆಲಸದ ಅವಾಂತರ ಮನಸ್ಸನ್ನು ದೇವರ ಸ್ಮರಣೆಗೆ ಹರಿಸಲು ಅತ್ಯಂತ ದುಃಸ್ತರವಾಗಿದೆ.

    ರಾಮಕೃಷ್ಣರು: ಧ್ಯಾನದ ಸಮಯದಲ್ಲಿ ಮಾತ್ರ ದೇವರ ಆಲೋಚನೆ ಮಾಡಿ ಉಳಿದ ಸಮಯದಲ್ಲಿ ಅವನನ್ನು ಮರೆಯುವೆಯೇನು? ಖಂಡಿತಾ ಕೂಡದು. ಶ್ರೀದುರ್ಗಾ ಪೂಜೆಯ ಸಮಯದಲ್ಲಿ ಯಾವಾಗಲೂ ಜಗಜ್ಜನನಿಯ ಪ್ರತಿಮೆಯ ಮುಂದೆ ಒಂದು ಭವ್ಯ ನಂದಾ ದೀಪ ಉರಿಯುತ್ತಿರುವುದನ್ನು ನೋಡಿಲ್ಲವೇ? ಅದು ಎಂದೂ ಆರಿ ಹೋಗಲು ಅವಕಾಶ ಕೊಡಕೂಡದು. ಅದೇನಾದರೂ ಆರಿ ಹೋದರೆ ಅಲ್ಲಿರುವವರಿಗೆ ವಿಪತ್ತು ಬರುತ್ತದೆ ಎಂಬ ಅಚಲ ನಂಬಿಕೆ ಇದ್ದಂತೆಯೇ ಇಷ್ಟ ದೇವತೆಯನ್ನು ಹೃದಯ ಕಮಲದಲ್ಲಿ ಸ್ಥಾಪಿಸಿದ ಮೇಲೆ ಆತನ ಸ್ಮರಣೆಯೆನ್ನುವ ನಂದಾ ದೀವಿಗೆಯನ್ನು ನಿರಂತರವಾಗಿ ಜ್ವಲಿಸುವಂತಾಗಿಸಬೇಕು. ಪ್ರಪಂಚದ ಕೆಲಸ ಕಾರ್ಯ ನೆರವೇರಿಸುತ್ತಿರುವಾಗ ಅನವರತವೂ ಆಂತರ್ಯದಲ್ಲಿ ಆ ಜ್ಯೋತಿ ಉರಿಯುತ್ತಿದೆಯೆ ಎಂಬುದನ್ನು ಎಚ್ಚರದಿಂದ ಪರೀಕ್ಷಿಸಬೇಕು.

    ಈ ಅಮೃತ ಸದೃಶ ವಾಣಿ ನಮಗೆ ಸರಿಯಾದ, ನಿಖರವಾದ ಗುರಿಯತ್ತ ಅಂದರೆ ಸದಾ ಭಗವನ್ನಾಮ ಸ್ಮರಣೆಯ ದೀಕ್ಷಾರ್ಥಿಗಳಾಗಿ ಮಗ್ನರಾಗಿರಬೇಕು ಎಂಬುದನ್ನು ಹೇಳುತ್ತದೆ.

    (ಲೇಖಕರು ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡದ ಅಧ್ಯಕ್ಷರು)

    ರಾಜ್ಯೋತ್ಸವ ರಸಪ್ರಶ್ನೆ - 21

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts