ಬೇಲೂರು: ಸಾಹಿತಿ ದಿ.ಬೇಲೂರು ಕೃಷ್ಣಮೂರ್ತಿ ಅವರ ಹೆಸರು ಅಜರಾಮರವಾಗಿ ಉಳಿಯುವಂತೆ ಮಾಡಲು ಸರ್ಕಾರ ಮುಂದಾಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮಾ.ನ.ಮಂಜೇಗೌಡ ಹೇಳಿದರು.
ಪಟ್ಟಣದ ವೈಕುಂಠ ಬೀದಿಯಲ್ಲಿರುವ ದಿ.ಬೇಲೂರು ಕೃಷ್ಣಮೂರ್ತಿ ಅವರ ನಿವಾಸದಲ್ಲಿ ತಾಲೂಕು ಕಸಾಪ ಹಾಗೂ ಕೃಷ್ಣಮೂರ್ತಿ ಅವರ ಕುಟುಂಬವರಿಂದ ಆಯೋಜಿಸಿದ್ದ ಬೇಲೂರು ಕೃಷ್ಣಮೂರ್ತಿಯವರ 93ನೇ ಜನ್ಮ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಹಿತಿ ಬೇಲೂರು ಕೃಷ್ಣಮೂರ್ತಿ ಜಾತಿ, ಮತ, ಪಂಥಗಳನ್ನು ಮೀರಿದ ವ್ಯಕ್ತಿತ್ವವನ್ನು ಹೊಂದಿದ್ದಲ್ಲದೆ, ವೈಜ್ಞಾನಿಕ ಮನೋಭಾವ ಉಳ್ಳವರಾಗಿದ್ದರು. ಅವರು ಸರಳ ಸಜ್ಜನಿಕೆಯ ವ್ಯಕ್ತಿವ್ವದೊಂದಿಗೆ ಶಿಸ್ತಿನ ಸಿಫಾಯಿಯಾಗಿದ್ದರು. ಸಮಯ ಪರಿಪಾಲನೆಗೆ ಹೆಚ್ಚಿನ ಆದ್ಯತೆ ನೀಡುತಿದ್ದರು. ಅವರ ಮುಂದಿನ ಜನ್ಮ ದಿನಾಚರಣೆಯಂದು ಅವರು ಬರೆದಿರುವ ಒಂದು ನಾಟಕವನ್ನು ಅಭಿನಯಿಸಿ ಪ್ರದರ್ಶಿಸಲು ಪ್ರಯತ್ನ ಪಡುತ್ತೇವೆ ಎಂದರು.
ಜಾನಪದ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ವೈ.ಎಸ್.ಸಿದ್ದೇಗೌಡ ಮಾತನಾಡಿ, ಶತ ನಾಟಕ ಸಾರ್ವಭೌಮ ಎಂಬ ಬಿರುದು ಪಡೆದು ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿರುವ ಬೇಲೂರು ಕೃಷ್ಣಮೂರ್ತಿಯವರಿಗೆ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಾಕಷ್ಟು ತಡವಾಗಿ ನೀಡಲಾಯಿತು. ಇವರ ಜನ್ಮ ದಿನಾಚರಣೆಯನ್ನು ಕಸಾಪ ರಾಜ್ಯ ಘಟಕ ಆಯೋಜನೆ ಮಾಡದಿರುವುದು ಬೇಸರದ ಸಂಗತಿಯಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಬಿ.ಎಲ್.ರಾಜೇಗೌಡ ಮಾತನಾಡಿ, ಬೇಲೂರು ಕೃಷ್ಣಮೂರ್ತಿಯವರ 90 ನೇ ಜನ್ಮ ದಿನಾಚರಣೆ ಸಮಯದಲ್ಲಿ ಒಂದು ವಾರ ಕೃಷ್ಣಮೂರ್ತಿ ಅವರ ನಾಟಕೋತ್ಸವವನ್ನು ನಡೆಸಿ ಬಹಳ ದೊಡ್ಡ ಕಾರ್ಯಕ್ರಮ ಮಾಡಬೇಕೆಂದು ತಯಾರಿ ನಡೆಯುತ್ತಿರುವ ಸಂದರ್ಭದಲ್ಲಿ ಅವರು ಮೃತಪಟ್ಟಿದ್ದು ನೋವಿನ ಸಂಗತಿಯಾಗಿದೆ. ಇವರ ಸಾಕಷ್ಟು ನಾಟಕಗಳು ಚಲನ ಚಿತ್ರಗಳಾಗಿ ಮೂಡಿಬಂದಿವೆ ಎಂದರು.
ಬೇಲೂರು ಕೃಷ್ಣಮೂರ್ತಿಯವರ ಕುಟುಂಬದ ಪ್ರಕಾಶ್, ಮಂಜುನಾಥ್, ರಮೇಶ್, ಸುರೇಶ್, ಶಿಲ್ಪಾ, ಕಸಾಪ ಗೌರವ ಕಾರ್ಯದರ್ಶಿ ಮಹೇಶ್, ಸಂಘಟನಾ ಕಾರ್ಯದರ್ಶಿ ಕುಮಾರಸ್ವಾಮಿ, ವಕೀಲ ಚಂದ್ರು, ಸುಲೈಮಾನ್, ಶಿಕ್ಷಕ ನಾಗರಾಜು, ಮ.ಶಿವಮೂರ್ತಿ, ಸಂಪತ್, ಇಂದಿರಮ್ಮ ಇದ್ದರು.