ಬ್ಯಾಡಗಿ: ಕೇವಲ ಭಾಷಣ, ವೇದಿಕೆಗಳಿಂದ ಕನ್ನಡ ಉಳಿಯುವುದಿಲ್ಲ. ಪ್ರತಿಯೊಬ್ಬರೂ ಮಾತೃಭಾಷೆ ಕನ್ನಡದ ಬಗೆಗೆ ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ಪ್ರಾಚೀನ ಇತಿಹಾಸ ಹೊಂದಿರುವ ಕನ್ನಡ ಭಾಷೆ ಸಾಹಿತ್ಯ ಶ್ರೀಮಂತವಾಗಿದೆ. ಭವಿಷ್ಯದ ಪೀಳಿಗೆಯಲ್ಲಿ ಕನ್ನಡದ ಸಂಭ್ರಮವನ್ನು ಹೃದಯದಲ್ಲಿ ಮೂಡಿಸುವ ಕೆಲಸವಾಗಬೇಕು ಎಂದು ಸಮ್ಮೇಳನಾಧ್ಯಕ್ಷ, ಸಾಹಿತಿ ಜೀವರಾಜ ಛತ್ರದ ಹೇಳಿದರು.
ಪಟ್ಟಣದ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಜನಪದ ಭಾಷೆ, ಸಂಸ್ಕೃತಿ ಆಚರಣೆಗಳಲ್ಲಿ ಕನ್ನಡ ಭಾಷೆ ಜೀವಂತವಾಗಿದೆ. ಪಟ್ಟಣದಲ್ಲಿ ಇಂಗ್ಲಿಷ್ ಭಾಷಾ ವ್ಯಾಮೋಹ, ಔದ್ಯೋಗಿಕ ಬೆಳವಣಿಗೆ ಸುಳಿಯಲ್ಲಿ ಸಿಲುಕಿ ಬಳಕೆ ಒಂದಿಷ್ಟು ಕುಸಿತ ಕಂಡಿದೆ. ಪ್ರತಿಯೊಬ್ಬರು ಕನ್ನಡ ಭಾಷೆ ಬಳಸುವ ಮೂಲಕ ಉತ್ತೇಜಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಜಾನಪದ ವಿದ್ವಾಂಸ ಪ್ರೊ. ಶಂಭು ಬಳಿಗಾರ, ಇಂಗ್ಲಿಷ್ ಶಾಲೆಗಳ ಗಿಳಿ ಪಾಠದಿಂದ ವಿದ್ಯಾರ್ಥಿಗಳಲ್ಲಿ ಜ್ಞಾನ ಸಂಪಾದನೆ ಶೂನ್ಯವಾಗಿದೆ. ಪಾಲಕರ ದ್ವಂದ್ವ ನೀತಿಗಳಿಂದ ಕನ್ನಡ ಶಾಲೆಗಳು ಮುಚ್ಚುವ ಹಂತದಲ್ಲಿದ್ದು, ಇಂಗ್ಲಿಷ್ ಕಲಿಕೆ ಹೆಚ್ಚು ವಿಜೃಂಭಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಾವು ಇಂಗ್ಲಿಷ್ ಬೇಡ ಎನ್ನುವುದಿಲ್ಲ, ಜ್ಞಾನಕ್ಕಾಗಿ ಎಲ್ಲ ಭಾಷೆ ಕಲಿಯಿರಿ. ಆದರೆ, ಮಾತೃಭಾಷೆಯ ಶಿಕ್ಷಣಕ್ಕೆ ಒತ್ತು ಕೊಡಬೇಕಿದೆ. ಕನ್ನಡ ಹೃದಯ ಭಾಷೆ ಆಗಬೇಕು ಎಂದರು.
ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ನಾಡು ನುಡಿ ಉಳಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಜಿಲ್ಲೆಯ ರೈತ ಸಮುದಾಯ ಅಭಿವೃದ್ಧಿಗೆ ಬೇಡ್ತಿ ಹಾಗೂ ವರದಾ ನದಿ ಜೋಡಣೆಗೆ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೇನೆ. ಬ್ಯಾಡಗಿ ಕ್ಷೇತ್ರದಲ್ಲಿ ವರದಾ ಹಾಗೂ ತುಂಗಭದ್ರಾ ನದಿ ನೀರು ಎಲ್ಲ ಕೆರೆಗಳಿಗೆ ಹರಿಯುತ್ತಿದೆ. ರೈತರು ಸಾಲದ ಸುಳಿಯಲ್ಲಿ ಸಿಲುಕಿರುವುದು ನಿಜ, ಯಾವುದೇ ಕಾರಣಕ್ಕೂ ಜೀವಹಾನಿಗೆ ಯತ್ನಿಸಬೇಡಿ ಎಂದು ಮನವಿ ಮಾಡಿದರು.
ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಮಾತನಾಡಿ, ಆಯಾ ಪ್ರದೇಶದಲ್ಲಿ ಕನ್ನಡ ಭಿನ್ನಭಿನ್ನವಾಗಿ ಬಳಕೆಯಾಗುತ್ತಿದ್ದು, ಎಲ್ಲರೂ ಮಾತೃಭಾಷೆಯನ್ನು ಬಳಸಿದಾಗ ಮಾತ್ರ ಉಳಿಯಲಿದೆ. ವಿಶ್ವದ ಯಾವುದೇ ಮೂಲೆಗೆ ತೆರಳಿದರೂ ಕನ್ನಡ ಮರೆಯಬಾರದು ಎಂದರು.
ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಬೇಕು. ಪ್ರತಿಯೊಬ್ಬರೂ ನಾಡು, ನುಡಿ ಏಳಿಗೆಗೆ ಹಾಗೂ ಕನ್ನಡಾಂಬೆಯ ಸೇವೆಗೆ ಕಟಿಬದ್ಧರಾಗಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಪ್ರೊ. ಲಿಂಗಯ್ಯ ಹಿರೇಮಠ ಮಾತನಾಡಿ, ಇತ್ತೀಚೆಗೆ ಹಾವೇರಿಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆದಿದ್ದು, ಎಲ್ಲ ತಾಲೂಕುಗಳಲ್ಲಿ ಸಾಹಿತ್ಯ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿದ್ದು, ಅನುದಾನ ಕೂಡ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಾಗಿದೆ ಎಂದು ತಿಳಿಸಿದರು.
ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಪ್ರಕಾಶ ಮನ್ನಂಗಿ ಮಾತನಾಡಿದರು.
ಸಮ್ಮೇಳನದ ಅಂಗವಾಗಿ ದಾನಮ್ಮದೇವಿ ದೇವಸ್ಥಾನದಿಂದ ಕನ್ನಡದ ತೇರು ಎಳೆಯುವ ಮೂಲಕ ಕನ್ನಡಾಂಬೆಯ ಮೆರವಣಿಗೆ ಜರುಗಿತು. ತಹಸೀಲ್ದಾರ್ ಎಫ್.ಎ. ಸೋಮನಕಟ್ಟಿ, ಸಾಹಿತಿ ಸತೀಶ ಕುಲಕರ್ಣಿ, ಪ್ರಾಂಶುಪಾಲ ಎಸ್.ಜಿ. ವೈದ್ಯ, ಪ್ರೇಮಾನಂದ ಲಕ್ಕಣ್ಣನವರ, ಪುರಸಭೆ ಅಧ್ಯಕ್ಷ ಬಾಲಚಂದ್ರ ಪಾಟೀಲ, ಸುಭಾಸ ಮಾಳಗಿ, ಚಂದ್ರಣ್ಣ ಶೆಟ್ಟರ್, ಕಸಾಪ ತಾಲೂಕಾಧ್ಯಕ್ಷ ಬಿ.ಎಂ. ಜಗಾಪುರ, ಕನ್ನಡಾಭಿಮಾನಿಗಳಾದ ವೀ.ವೀ. ಹಿರೇಮಠ, ಮುರಿಗೆಪ್ಪ ಶೆಟ್ಟರ, ಮುನಾಫಲಿ ಎರೇಸೀಮೆ, ಬಸವರಾಜ ಸುಂಕಾಪುರ ಇತರರಿದ್ದರು. ವೈ.ಬಿ. ಹೊಸಳ್ಳಿ, ಎಸ್.ಬಿ. ಇಮ್ಮಡಿ ಕಾರ್ಯಕ್ರಮ ನಿರ್ವಹಿಸಿದರು.
ಪ್ರಾಥಮಿಕ ಹಂತದಿಂದಲೇ ಮಕ್ಕಳು ಕನ್ನಡ ಭಾಷೆಗೆ ಒತ್ತು ನೀಡಬೇಕು. ಆದರೆ, ಸರ್ಕಾರದ ನೀತಿಗಳು, ಪಾಲಕರ ದೂರದೃಷ್ಟಿಯ ವಿಚಾರಗಳು ಕನ್ನಡ ಭಾಷೆಗೆ ತೊಡಕಾಗಿವೆ. ಜಿಲ್ಲೆ ಹಾಗೂ ತಾಲೂಕು ಮಟ್ಟದ ಕನ್ನಡ ಕಾರ್ಯಕ್ರಮಗಳಿಗೆ ಸರ್ಕಾರ ಹೆಚ್ಚು ಅನುದಾನ ಬಿಡುಗಡೆಗೊಳಿಸುವ ಮೂಲಕ ಪ್ರೋತ್ಸಾಹ ನೀಡಿದಲ್ಲಿ ಇನ್ನಷ್ಟು ಅನುಕೂಲವಾಗಲಿದೆ. ಸ್ಥಳೀಯ ಮಟ್ಟದ ಬರಹಗಾರರು, ಸಾಹಿತಿಗಳು, ಕಲಾವಿದರಿಗೆ ಮಾನ್ಯತೆ ನೀಡುವಲ್ಲಿ ನಾವೆಲ್ಲ ಸಹಕರಿಸಿದಾಗ ಕನ್ನಡ ಭಾಷೆ ಇನ್ನಷ್ಟು ಗಟ್ಟಿಗೊಳಿಸಬಹುದು.
| ಸಂಕಮ್ಮ ಸಂಕಣ್ಣನವರ ಸಾಹಿತಿ