ಗೋಕಾಕ: ಕೂಸಿನ ಮನೆಗಳ ಮುಖ್ಯ ಉದ್ದೇಶ ನರೇಗಾ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ದುಡಿಯುವ ಮಹಿಳಾ ಕೂಲಿಕಾರರ ಭಾಗವಹಿಸುವಿಕೆ ಪ್ರಮಾಣ ಹೆಚ್ಚಿಸುವುದಾಗಿದೆ. ಪ್ರತಿ ಗ್ರಾಪಂ ಮಟ್ಟದಲ್ಲಿ ಒಂದು ಕೂಸಿನ ಮನೆ ಕೇಂದ್ರ ಈಗಾಗಲೇ ಪ್ರಾರಂಭಿಸಲಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಘಸ್ತೆ ಹೇಳಿದರು.
ನಗರದ ಸಾಮರ್ಥ್ಯ ಸೌಧದಲ್ಲಿ ಕೂಸಿನ ಮನೆ ಆರೈಕೆದಾರರ ತರಬೇತಿ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ಕೂಲಿ ಕಾರ್ಮಿಕರು ಪ್ರತಿ-ನಿತ್ಯ ಕೆಲಸಕ್ಕೆ ತೆರಳುವ ಅನಿವಾರ್ಯತೆ ಇರುತ್ತದೆ. ಇಂತಹ ಕುಟುಂಬದ ಮಹಿಳೆಯರು ಚಿಕ್ಕ ಮಕ್ಕಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವುದು ಅಸಾಧ್ಯ. ಹಾಗಾಗಿ ಕೆಲಸದಿಂದ ಮನೆಗೆ
ಮರಳುವವರೆಗೆ ಮಗುವಿನ ಆರೈಕೆ ನೋಡಿಕೊಳ್ಳಲು ಕೂಸಿನ ಮನೆ ಆರಂಭಿಸಲಾಗಿದೆ. ಮಕ್ಕಳು ಅಪೌಷ್ಟಿಕತೆಗೆ ಒಳಗಾಗುವುದನ್ನು ತಡೆಯಬೇಕಿದೆ ಎಂದರು.
ಕೇಂದ್ರಗಳಿಗೆ ಸ್ಥಳೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದುಡಿಯುವ ಮಹಿಳೆಯರನ್ನು ಹಾಗೂ ಓದಲು
ಬರೆಯಲು ಬರುವಂತಹ ಮಹಿಳೆಯರನ್ನು ಕೂಸಿನ ಮನೆ ಕೇರ್‌ಟೇಕರ್ಸ್ (ಆರೈಕೆದಾರರು) ಎಂದು ಸ್ಥಳೀಯವಾಗಿ ನೇಮಕ ಮಾಡಿರುವವರಿಗೆ ಏಳು ದಿನಗಳ ತರಬೇತಿ ನೀಡಲಾಗುವುದು ಎಂದರು.
ತಾಪಂ ಸಿಬ್ಬಂದಿ ನಜರೀನ ಕೊಣ್ಣೂರ, ಯಶೋಧಾ ಸಂಕನವರ, ಉಮೇಶ ವಗ್ಗರ, ಐಇಸಿ ಸಂಯೋಜಕ ಶಂಕರ ಗುಜನಟ್ಟಿ ಇತರರಿದ್ದರು.