ಲಿಂಗಸುಗೂರು: ರಾಯಚೂರಿಗೆ ಏಮ್ಸ್ ಮಂಜೂರು ಮಾಡಲು ಪ್ರಧಾನಿ ನರೇಂದ್ರ ಮೋದಿ ಬಳಿ ಸಿಎಂ ಸಿದ್ದರಾಮಯ್ಯ ಅವರು ಸರ್ವ ಪಕ್ಷಗಳ ನಿಯೋಗದೊಂದಿಗೆ ತೆರಳಿ ಮನವರಿಕೆ ಮಾಡಬೇಕೆಂದು ಆಗ್ರಹಿಸಿ ಎಸಿ ಕಚೇರಿ ಎಫ್‌ಡಿಸಿ ಅನುಪಮಾ ಸಿಂಗ್‌ಗೆ ಮಂಗಳವಾರ ತಾಲೂಕು ಹೋರಾಟ ಸಮಿತಿ ಮನವಿ ಸಲ್ಲಿಸಿತು.

ಇದನ್ನೂ ಓದಿ:ರಾಯಚೂರಿಗೆ ಏಮ್ಸ್ ಘೋಷಣೆ ಮಾಡಲಿ
ಕಲ್ಯಾಣ ಕರ್ನಾಟಕ ಪ್ರದೇಶ ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದಿದ್ದು, ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಡಾ.ಡಿ.ಎಂ.ನಂಜುಂಡಪ್ಪ ವರದಿಯಂತೆ ಐಐಟಿ ಸ್ಥಾಪಿಸಬೇಕು ಎಂಬ ಮಹತ್ವದ ನಿರ್ಧಾರವಾಗಿತ್ತು, ಆದರೆ, ರಾಯಚೂರು ಜಿಲ್ಲೆಗೆ ದ್ರೋಹವೆಸಗಿ ಧಾರವಾಡಕ್ಕೆ ಮಂಜೂರು ಮಾಡಲಾಯಿತು. ಕೇಂದ್ರ ಸರ್ಕಾರ 2020 ರಲ್ಲಿ ರಾಜ್ಯಕ್ಕೆ ಏಮ್ಸ್ ಮಂಜೂರು ಮಾಡುವ ನಿರ್ಧಾರ ಪ್ರಕಟಿಸಿತು. ಆದರೆ, ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಹೋರಾಟಕ್ಕೆ ಜಿಲ್ಲಾಧಿಕಾರಿ ಸ್ಪಂದಿಸಿ ಏಮ್ಸ್ ಸ್ಥಾಪನೆಗೆ ಸಂಬಂಧಿಸಿ ಸರ್ಕಾರಕ್ಕೆ ಪತ್ರ ಬರೆದರು. ಪ್ರಾದೇಶಿಕ ಅಸಮತೋಲನೆ ನಿವಾರಣೆಗಾಗಿ ಮಹತ್ವಾಕಾಂಕ್ಷಿ ಜಿಲ್ಲೆ ಎಂದು ಘೋಷಿಸಲ್ಪಟ್ಟ ರಾಯಚೂರಿನಲ್ಲಿ ಏಮ್ಸ್ ಸಂಸ್ಥೆ ಸ್ಥಾಪಿಸಬೇಕು ಎಂದು ರಾಜ್ಯ ಸರ್ಕಾರ ಸಚಿವ ಸಂಪುಟ ತೀರ್ಮಾನ ಕೈಗೊಂಡು ಸರ್ವ ಪಕ್ಷಗಳ ನಿಯೋಗ ತೆರಳಿ ಸುದೀರ್ಘ ಹೋರಾಟದ ಬಗ್ಗೆ ಮನವರಿಕೆ ಮಾಡಿ ಅನಿರ್ದಿಷ್ಟಾವಧಿ ಧರಣಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿದರು. ಪ್ರಮುಖರಾದ ಡಿ.ಬಿ.ಸೋಮನಮರಡಿ, ಎಸ್.ಎಂ.ಕಾಡ್ಲೂರು, ಅಮರೇಶ ಗುಂಡಸಾಗರ, ರಾಜಾಸಾಬ್, ಯಂಕಪ್ಪ ಚಿತ್ತಾಪುರ, ಬೋದು ನಾಯ್ಕ, ಯಲ್ಲಪ್ಪ ವಡ್ಡರ್, ಸಹದೇವಪ್ಪ ಈಚನಾಳ, ಬಸನಗೌಡ ಪಾಟೀಲ್, ಯಮನಪ್ಪ ಸರ್ಜಾಪುರ, ಶಂಕರಗೌಡ ಗುಂಡಸಾಗರ, ಮಲ್ಲನಗೌಡ ಇತರರಿದ್ದರು.