ಶಿಕಾರಿಪುರ: ಕನ್ನಡ ಅತ್ಯಂತ ಶ್ರೇಷ್ಠ, ಮಧುರ ಹಾಗೂ ಹೃದಯಕ್ಕೆ ಹಿತವೆನಿಸುವ ಸುಂದರ ಭಾಷೆ. ಈ ಭಾಷೆಯಲ್ಲಿ ನಾವು ಹೆಚ್ಚು ಆಪ್ತತೆಯನ್ನು ಕಾಣಬಹುದು ಎಂದು ಭದ್ರಾವತಿ ಆಕಾಶವಾಣಿಯ ಉದ್ಘೋಷಕ ಡಾ. ಬಸವರಾಜ್ ಹೇಳಿದರು.
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ, ಆಕಾಶವಾಣಿ ಭದ್ರಾವತಿ ಮತ್ತು ಭಾಷಾ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಹಳೆಗನ್ನಡ,ನಡುಗನ್ನಡ, ಕೀರ್ತನಕಾರರು ಮತ್ತು ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರ ಪರಿಚಯಾಧಾರಿತ ಕ್ಯಾಂಪಸ್ ಕಟ್ಟೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಲವಾರು ಕವಿಗಳು, ಕೀರ್ತನಕಾರರು, ಜನಪದ ಕಲಾವಿದರು ಹಾಗೂ ಶರಣರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಇಂದು ಹಳೆಗನ್ನಡ, ನಡುಗನ್ನಡದ ಸೊಗಸನ್ನು ನಮಗೆ ಪ್ರಶಿಕ್ಷಣಾರ್ಥಿಗಳು ತಿಳಿಸಿಕೊಟ್ಟಿದ್ದಾರೆ. ಮುಂದೆ ಅವರು ತಮ್ಮ ವಿದ್ಯಾರ್ಥಿಗಳಿಗೆ ಇದನ್ನು ಹಂಚಬೇಕು. ಇದು ಪಠ್ಯ ಮತ್ತು ಜ್ಞಾನಕ್ಕೆ ಸಂಬಂಧಿಸಿದ ವಿಚಾರ ಎಂದರು.
ಭದ್ರಾವತಿ ಆಕಾಶವಾಣಿಯು ಟಿವಿ, ಸಿನಿಮಾ, ಮೊಬೈಲ್ ಹಾವಳಿ ನಡುವೆಯೂ ತನ್ನ ಸೊಗಡನ್ನು ಉಳಿಸಿಕೊಂಡಿದೆ ಎಂದರೆ ಇಂತಹ ಅರ್ಥವತ್ತಾದ ಕಾರ್ಯಕ್ರಮಗಳಿಂದ. ಈ ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂದಿದ್ದು ಸಂತಸ ತಂದಿದೆ ಎಂದು ಹೇಳಿದರು.
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಿ.ಎಸ್.ಶಿವಕುಮಾರ್, ಭಾಷಾ ಸಂಘದ ಸಂಚಾಲಕ ಡಾ. ವೀರೇಂದ್ರಕುಮಾರ ವಾಲಿ, ಡಾ. ಕೆ.ಎಸ್.ಕಿರಣ್‌ಕುಮಾರ್, ಡಾ. ನಾಗೇಂದ್ರಪ್ಪ, ಡಾ. ವಾಣಿ ನಾಯಕಿ, ಡಾ. ರವಿ, ಡಾ. ದೇವರಾಜ್ ಇತರರಿದ್ದರು.
ಪ್ರಶಿಕ್ಷಣಾರ್ಥಿಗಳಾದ ರಮೇಶ್ ಗುತ್ತೇದಾರ್-ಆದಿಕವಿ ಪಂಪ, ಮೌನೇಶ್- ರನ್ನ (ಹಳೆಗನ್ನಡ ಕವಿ), ಭಾಗ್ಯಶ್ರೀ-ಕುಮಾರವ್ಯಾಸ, ಪ್ರಿಯಾ-ರಾಘವಾಂಕ (ನಡುಗನ್ನಡ ಕವಿ), ಎಚ್.ಆರ್.ರಮ್ಯಾ- ಪುರಂದರದಾಸ, ಹನುಮಂತ ದಬಾಡಿ-ಕನಕದಾಸ(ಕೀರ್ತನಕಾರರು), ಬಿ.ಸವಿತಾ-ಸಿ.ಎನ್.ಆರ್.ರಾವ್, ಮುನ್ನಿಚಮನ್ ಸಾಬ್- ಡಾ. ರಾಜ್‌ಕುಮಾರ್(ಕರ್ನಾಟಕ ರತ್ನ ಪುರಸ್ಕೃತರು) ಕ್ಯಾಂಪಸ್ ಕಟ್ಟೆ ಕಾರ್ಯಕ್ರಮದಲ್ಲಿ ವಿಷಯ ಮಂಡಿಸಿದರು.
