ಗೋಕರ್ಣ: ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರದಿಂದ ಮಹಾಶಿವರಾತ್ರಿ ನಿಮಿತ್ತ ಭೂಕೈಲಾಸ ಖ್ಯಾತಿಯ ಗೋಕರ್ಣ ಕ್ಷೇತ್ರದಲ್ಲಿ ಫೆ. 26, 27 ಮತ್ತು 28 ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಕ್ಷೇತ್ರದಲ್ಲಿ ಶಿವರಾತ್ರಿಯಲ್ಲಿ ಪದ್ಧತಿಯಂತೆ ನಡೆಯುವ ವೈವಿಧ್ಯಮಯ ಧಾರ್ವಿುಕ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ ಸಮಾರಂಭಗಳು ದೇಶಕ್ಕೆ ರಾಜ್ಯದ ಅಪೂರ್ವ ಕಲೆಗಳ ದರ್ಶನ ನೀಡುವಂತಾಗಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಮಹಾಶಿವರಾತ್ರಿಗಾಗಿ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಕರೆಯಲಾಗಿದ್ದ ಪೂರ್ವ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಉಪಯುಕ್ತ ಮಾರ್ಗದರ್ಶನ ಮತ್ತು ಅಧಿಕಾರಿ ವರ್ಗಕ್ಕೆ ಅಗತ್ಯ ಸಲಹೆ-ಸೂಚನೆ ನೀಡಿದರು.
ಪರಶಿವ ಆತ್ಮಲಿಂಗ ಪೂಜೆ ಮತ್ತು ಮಹಾಶಿವರಾತ್ರಿ ಆಚರಣೆಗೆಂದು ವಿವಿಧ ರಾಜ್ಯಗಳಿಂದ ಆಗಮಿಸುವ ಭಕ್ತರಿಗೆ ಇಲ್ಲಿ ಆಯೋಜಿಸಲಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳು ಕರ್ನಾಟಕದ ಕಲಾ ಸಂಸ್ಕೃತಿಯನ್ನು ದೇಶಕ್ಕೆ ಪರಿಚಯಿಸುವಂತಿರಬೇಕು. ಈ ಮೂಲಕ ರಾಜ್ಯದ ವೈವಿಧ್ಯಮಯ ಕಲಾ ವೈಭವಗಳು ದೇಶದ ಎಲ್ಲೆಡೆ ತಲುಪಲು ಮಹಾಶಿವರಾತ್ರಿ ಸುಲಭ ಸಾಧನವಾಗಿ ಪ್ರವಾಸೋದ್ಯಮ ಬೆಳವಣಿಗೆಗೂ ಅದು ಸಹಕಾರಿಯಾಗುತ್ತದೆ. ರಾಜ್ಯ ಸರ್ಕಾರ ಪುರಾತನ ಶಿವ ಕ್ಷೇತ್ರ ಗೋಕರ್ಣಕ್ಕೆ ಒದಗಿಸಿರುವ ಈ ಸದಾವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲು ಎಲ್ಲ ಪಕ್ಷ, ಎಲ್ಲ ವರ್ಗ ಮತ್ತು ಕ್ಷೇತ್ರದ ಸರ್ವರೂ ಒಗ್ಗಟ್ಟಿನಿಂದ ಮುಂದಾಗಬೇಕು ಎಂದು ವಿನಂತಿಸಿದರು. ಗೋಕರ್ಣಕ್ಕೆ ಇಂತಹ ಸದವಕಾಶ ಒದಗಿಸಿಕೊಟ್ಟ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತವನ್ನು ಶಾಸಕರು ಅಭಿನಂದಿಸಿದರು.
ಮಹಾಶಿವರಾತ್ರಿಯ ಎಲ್ಲ ದಿನಗಳಲ್ಲಿ ಇಲ್ಲಿನ ಬೀಚ್ ಸೇರಿ ಸಂಪೂರ್ಣ ಕ್ಷೇತ್ರದ ಸ್ವಚ್ಛತೆ ನಿರ್ವಹಿಸುವ ಅಗತ್ಯವಿದೆ. ಅದಕ್ಕಾಗಿ ಸ್ಥಳೀಯ ಪಂಚಾಯಿತಿಯೊಂದಿಗೆ ಕುಮಟಾ ಮತ್ತು ಅಂಕೋಲಾ ಪುರಸಭೆ ಸಿಬ್ಬಂದಿ ಸಹಕಾರದಲ್ಲಿ ನಿರ್ವಹಿಸಬೇಕಾದ ಕೆಲಸಗಳನ್ನು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ಕಾರ್ಯಕ್ರಮ ನಡೆಯುವ ಮುಖ್ಯ ಸಾಗರ ತೀರ ಮತ್ತು ಕ್ಷೇತ್ರದ ಎಲ್ಲ ಪ್ರಮುಖ ರಸ್ತೆಗಳಲ್ಲಿ ಹೆಚ್ಚಿನ ಬೀದಿ ದೀಪ ವ್ಯವಸ್ಥೆಯ ಕುರಿತು ಹೆಸ್ಕಾಂ ಸಿಬ್ಬಂದಿ ಜತೆ ರ್ಚಚಿಸಿದರು. ಏಕಮುಖ ಸಂಚಾರದ ಮೀನುಪೇಟೆ ರಸ್ತೆ ಮತ್ತು ಇತರೆಡೆಗಳಲ್ಲಿ ಆಗಬೇಕಾದ ಅಗತ್ಯ ಕಾಮಗಾರಿಗಳನ್ನು ಇಂದಿನಿಂದಲೇ ಪ್ರಾರಂಭಿಸಲು ಲೋಕೋಪಯೋಗಿ ಮತ್ತು ಜಿಪಂ ಅಧಿಕಾರಿಗಳಿಗೆ ಶಾಸಕರು ವಿವರಿಸಿದರು.
ಸಭೆಯಲ್ಲಿ ಕುಮಾರ ಮಾರ್ಕಾಂಡೆ ಫೆ. 26, 27 ಮತ್ತು 28ರಂದು ಆಯೋಜಿಸಬಹುದಾದ ಕಾರ್ಯಕ್ರಮಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸಿದರು.
ಕಾರ್ಯಕ್ರಮದ ಆಯವ್ಯಯ ನಿರ್ವಹಣೆ ಸಂಬಂಧ ಸ್ಥಳೀಯ ಪ್ರಮುಖರಿಂದ ಕೂಡಿದ ಸಮಿತಿ ರಚಿಸಲಾಯಿತು. ಸಭೆಯಲ್ಲಿ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗ್ವತ್, ಜಿಪಂ ಮಾಜಿ ಸದಸ್ಯ ಪ್ರದೀಪ ನಾಯಕ, ತಾಪಂ ಮಾಜಿ ಸದಸ್ಯ ಮಹೇಶ ಶೆಟ್ಟಿ, ಕ್ಷೇತ್ರದ ಆನುವಂಶೀಯ ಉಪಾಧಿವಂತ ಮಂಡಳ ಅಧ್ಯಕ್ಷ ವೇ.ರಾಜಗೋಪಾಲ ಅಡಿ, ಶ್ರೀ ಮಹಾಬಲೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮೋಹನ ನಾಯಕ, ಪಿಎಸ್ಐ ಖಾದರ್ ಬಾಷಾ, ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ ಜನ್ನು, ಸದಸ್ಯರಾದ ಸುಜಯ ಶೆಟ್ಟಿ, ಗಣಪತಿ ನಾಯ್ಕ,ಪ್ರಭಾಕರ ಪ್ರಸಾದ, ಇತರರು ಮಾತನಾಡಿದರು.
ಪಂಚಾಯಿತಿ ಅಧ್ಯಕ್ಷೆ ಸುಮನಾ ಗೌಡ, ಉಪಾಧ್ಯಕ್ಷೆ ನಾತಾಲಾ ರೆಬೆಲೊ ದಿನ್ನಿ, ಕುಮಟಾ ವಿಭಾಗೀಯ ಅಧಿಕಾರಿ ಕಲ್ಯಾಣಿ ಕಾಂಬ್ಳೆ, ತಹಸೀಲ್ದಾರ್ ಸತೀಶ ಗೌಡ, ತಾಪಂ ಇಒ ರಾಜೇಂದ್ರ ಭಟ್ಟ, ಹನೇಹಳ್ಳಿ ಗ್ರಾಪಂ ಅಧ್ಯಕ್ಷ ಸಣ್ಣು ಗೌಡ, ಇತರರಿದ್ದರು.
ಪಂಚಾಯಿತಿ ಪ್ರಭಾರ ಪಿಡಿಒ ಬಾಲಚಂದ್ರ ಪಟಗಾರ ನಿರ್ವಹಿಸಿದರು. ಕಾರ್ಯದರ್ಶಿ ಮಂಜುನಾಥ ಕೆ., ವಿನಾಯಕ ಸಿದ್ದಾಪುರ ಮತ್ತು ಸಿಬ್ಬಂದಿ ಸಹಕರಿಸಿದರು.