ಮೂಡಿಗೆರೆ: ಎಲ್ಲ ಧರ್ಮದವರೂ ಸಾಮರಸ್ಯದಿಂದ ಬದುಕಬೇಕೆಂಬ ಉದ್ದೇಶದಿಂದ ಬಾಲಗಂಗಾಧರನಾಥ ತಿಲಕ್ ಅವರು ಸ್ವಾತಂತ್ರೃ ಪೂರ್ವದಲ್ಲಿ ಗಣಪತಿ ಪ್ರತಿಷ್ಠಾಪನೆ ಪ್ರಾರಂಭಿಸಿದರು. ಗಣೇಶೋತ್ಸವದಿಂದ ಸರ್ವಧರ್ಮೀಯರಲ್ಲಿ ಸಾಮರಸ್ಯ ಮೂಡುವ ಪ್ರಯತ್ನವಾಗಬೇಕು ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಸಾರ್ವಜನಿಕ ಮಹಾಗಣಪತಿ ಸೇವಾ ಸಮಿತಿಯಿಂದ ಶುಕ್ರವಾರ ಏರ್ಪಡಿಸಿದ್ದ 108 ತೆಂಗಿನಕಾಯಿ ಗಣ ಹೋಮದಲ್ಲಿ ಆಶೀರ್ವಚನ ನೀಡಿ, ಬಾಲಗಂಗಾಧರನಾಥ ತಿಲಕ್ ಅವರು ಹಿಂದು ಸಂಸ್ಕೃತಿ, ಶಿಕ್ಷಣ, ಸ್ವದೇಶಿ ಪರಂಪರೆ ಉಳಿಯಬೇಕು. ಮಾದಕ ವಸ್ತುಗಳು ನಿಯಂತ್ರಣವಾಗಬೇಕು. ಸಂಪೂರ್ಣ ಸ್ವಾತಂತ್ರ್ಯದಿಂದ ಎಲ್ಲವೂ ಸದೃಢವಾಗಬೇಕು ಎಂಬ ಕನಸು ಕಂಡಿದ್ದರು. ಆದರೆ ಈಗ ಅಶಾಂತಿ, ಧರ್ಮಗಳ ನಡುವೆ ವೈಮನಸ್ಸು, ಸಂಘರ್ಷ ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಯುವ ಜನತೆ ವಿದೇಶಿ ಸಂಸ್ಕೃತಿಯತ್ತ ಮಾರು ಹೋಗುತ್ತಿದ್ದಾರೆ. ಪಾಲಕರು ಹಾಗೂ ಮಕ್ಕಳ ನಡುವಿನ ಅಮೂಲ್ಯ ಸಂಬಂಧ ಕಳಚಿ ಅಂತರ ಸೃಷ್ಟಿಯಾಗುತ್ತಿದೆ. ಯುವ ಜನಾಂಗ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದೆ. ಇದರ ನಡುವೆ ಕೆಟ್ಟ ರಾಜಕಾರಣದಿಂದಾಗಿ ಧರ್ಮ, ಜಾತಿ ಹೆಸರಿನಲ್ಲಿ ಗಲಭೆ ಹಾಗೂ ಅಶಾಂತಿ ಉಂಟಾಗುತ್ತಿದೆ. ಹಿಂದು ಧರ್ಮದ ಆಚರಣೆಗೆ ಅಡ್ಡಿಪಡಿಸಲಾಗುತ್ತಿದೆ. ಇದನ್ನು ಪ್ರಶ್ನಿಸದಿದ್ದರೆ ನಮ್ಮ ಧರ್ಮ ಹಾಗೂ ದೇಶ ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಉಪಸಭಾಪತಿ ಎಂ.ಕೆ.ಪ್ರಾಣೇಶ್, ಗಣಪತಿ ಸೇವಾ ಸಮಿತಿ ಅಧ್ಯಕ್ಷ ಪಿ.ಜಿ.ಅನುಕುಮಾರ್, ಹಾಸ್ಯನಟ ರಮೇಶ್ ಯಾದವ್, ಮಂಚೇಗೌಡ, ದೀಪಕ್ ದೊಡ್ಡಯ್ಯ, ಯೋಗೇಶ್ ಪೂಜಾರಿ, ಜೆ.ಎಸ್.ರಘು ಇತರರಿದ್ದರು.