ಸೋಮವಾರಪೇಟೆ: ರೊಬಸ್ಟಾ ಹಾಗೂ ಅರೇಬಿಕಾ ಕಾಫಿ ಬೆಲೆ ದರ ಏರಿಕೆಯಾಗಿದ್ದು, ಇದೇ ಮೊದಲ ಬಾರಿಗೆ ಸಾರ್ವಕಾಲಿಕ ಗರಿಷ್ಠ ದರ ದಾಖಲಿಸಿದೆ.
ಪ್ರಸಕ್ತ ಜಿಲ್ಲೆಯಲ್ಲಿ ಸುರಿದ ಮುಂಗಾರು ಮಳೆಗೆ ಅರೇಬಿಕಾ, ರೊಬಸ್ಟಾ ಕಾಫಿ ತೋಟಗಳು ರೋಗಪೀಡಿತವಾಗಿ ಕಾಫಿ ಫಸಲು ಹಾನಿಯಾಗಿದೆ. ಈಗಾಗಲೇ ಶೇ.40ರಷ್ಟು ಫಸಲು ಹಾನಿಯಾಗಿದೆ ಎಂದು ಬೆಳೆಗಾರರು ತಿಳಿಸಿದ್ದಾರೆ. ಮುಂದೆಯೂ ಧಾರಾಕಾರ ಮಳೆ ಸುರಿದರೆ ಶೇ.33ಕ್ಕಿಂತಲೂ ಹೆಚ್ಚಿನ ನಷ್ಟವಾಗಬಹುದು ಎಂದು ಕಾಫಿ ಮಂಡಳಿ ಅಧಿಕಾರಿಗಳೇ ಹೇಳಿದ್ದಾರೆ. ಈ ಕಾರಣಗಳಿಂದ ಕಾಫಿ ಬೆಲೆ ಜಾಸ್ತಿಯಾದರೂ ಕಾಫಿ ಬೆಳೆಗಾರರು ಸಂಭ್ರಮಪಡಲು ಸಾಧ್ಯವಾಗುತ್ತಿಲ್ಲ.
ಕರ್ನಾಟಕ ಫ್ಲಾಂಟರ್ಸ್ ಅಸೋಸಿಯೇಷನ್ ಬೆಲೆ ಆ.21ಕ್ಕೆ ರೊಬಸ್ಟಾ ಪಾರ್ಚ್‌ಮೆಂಟ್ 50 ಕೆ.ಜಿ.ಗೆ 17,500 ರೂ., ರೊಬಸ್ಟಾ ಚೆರ‌್ರಿಗೆ 10,650 ರೂ., ಅರೇಬಿಕಾ ಪಾರ್ಚ್‌ಮೆಂಟ್ 15,900 ರೂ., ಅರೇಬಿಕಾ ಚೆರ‌್ರಿಗೆ 10,400 ರೂ. ಬೆಲೆ ಇದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೇರೆಯ ಮುದ್ರಮನೆ ಕಾಫಿ ಖರೀದಿದಾರರ ಖರೀದಿ ಬೆಲೆ ರೊಬಸ್ಟಾ ಪಾರ್ಚ್‌ಮೆಂಟ್‌ಗೆ ಅತ್ಯಧಿಕ 20,000 ರೂ. ಇದೆ. ಅರೇಬಿಕಾ ಪಾರ್ಚ್‌ಮೆಂಟ್ ಕಾಫಿಗೆ 16750 ರೂ. ಇದೆ. ಕಳೆದ ವರ್ಷ ಆಗಷ್ಟ್‌ನಲ್ಲಿ ರೊಬಸ್ಟಾ ಪಾರ್ಚ್‌ಮೆಂಟ್ 50 ಕೆ.ಜಿ.ಗೆ 14,600 ರೂ., ರೋಬಸ್ಟಾ ಚೆರ‌್ರಿಗೆ 8950 ರೂ., ಅರೇಬಿಕಾ ಪಾರ್ಚ್‌ಮೆಂಟ್ 14,550ರೂ., ಅರೇಬಿಕಾ ಚೆರಿಗೆ 8,450 ರೂ. ಬೆಲೆ ಇತ್ತು.
ಮಾರುಕಟ್ಟೆ ತಜ್ಞರ ಪ್ರಕಾರ ಜಾಗತಿಕ ಬೇಡಿಕೆಯಲ್ಲಿ ಗಣನೀಯ ಏರಿಕೆ, ವಿಶ್ವದ ಅಗ್ರಗಣ್ಯ ಕಾಫಿ ರಫ್ತುದಾರ ಬ್ರೆಜಿಲ್, ಇಂಡೋನೇಷ್ಯಾ ಮತ್ತು ವಿಯಟ್ನಾಂನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ರೊಬಸ್ಟಾ ಕಾಫಿ ಬೆಳೆ ನಾಶವಾಗಿರುವುದೇ ದರ ಏರಿಕೆಗೆ ಕಾರಣ ಎನ್ನಲಾಗಿದೆ.
ಅಕಾಲಿಕ ಮಳೆ, ಮುಂಗಾರು ವಿಳಂಬ, ರೋಗಬಾಧೆ, ಕಾರ್ಮಿಕರ ಕೊರತೆ, ದುಪ್ಪಟ್ಟು ಕೂಲಿ, ಗಗನಕ್ಕೇರಿದ ರಾಸಾಯನಿಕ ಗೊಬ್ಬರ ಹಾಗು ಕೀಟನಾಶಕಗಳ ಬೆಲೆಯಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿ ಕಾಫಿ ಬೆಳೆಗಾರರು ಸಾಲಗಾರರಾಗಿದ್ದರು. ಅನೇಕರು ಕಾಫಿ ತೋಟ ನಿರ್ವಹಣೆ ಮಾಡಲಾಗದೆ ಪಾಳು ಬಿಟ್ಟಿದ್ದರು. ಈಗ ಕಾಫಿ ಬೆಲೆ ಹೆಚ್ಚಾಗಿದ್ದರೂ ಅತಿವೃಷ್ಟಿಯಿಂದ ಫಸಲು ಹಾನಿಯಾಗಿದೆ. ಕಾಫಿ ಬೆಳೆಗಾರರಿಗೆ ನಿರಾಸೆಯಾಗಿದೆ.
ಮುರ‌್ನಾಲ್ಕು ದಶಕಗಳ ಹಿಂದೆ ತಾಲೂಕಿನ ಶಾಂತಳ್ಳಿ ಹೋಬಳಿ ಸೇರಿದಂತೆ ಮಲೆನಾಡ ಭಾಗದಲ್ಲಿ ಹೆಚ್ಚು ಮಳೆ ಬೀಳುತ್ತಿದ್ದುದ್ದರಿಂದ ಏಲಕ್ಕಿ, ಭತ್ತ ಬೆಳೆಯುತ್ತಿದ್ದರು. 1994ರಲ್ಲಿ ಕಾಫಿ ಮುಕ್ತ ಮಾರುಕಟ್ಟೆ ಸಿಕ್ಕಿದ ನಂತರ ಅರೇಬಿಕಾ ಕಾಫಿ ಬೆಲೆ ಗಗನಕ್ಕೇರಿತ್ತು. ವಾರ್ಷಿಕ ಮಳೆಯೂ ಕಡಿಮೆಯಾದಂತೆ ಶಾಂತಳ್ಳಿ ಹೋಬಳಿ ಮತ್ತು ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಏಲಕ್ಕಿ ತೋಟ ತೆಗೆದು ಕಾಫಿ ತೋಟ ಮಾಡಲು ಪ್ರಾರಂಭಿಸಿದರು. ಪ್ರಸಕ್ತ ಎಕರೆಗೆ ಒಂದರಿಂದ ಎರಡು ಟನ್ ರೊಬಸ್ಟಾ ಕಾಫಿ ಉತ್ಪಾದನೆ ಮಾಡುತ್ತಿದ್ದಾರೆ.
ಕಾಫಿ ಬೆಲೆ ಹೆಚ್ಚಾದ ಹಿನ್ನೆಲೆಯಲ್ಲಿ ತೋಟ ನಿರ್ವಹಣೆಗೆ ಹೆಚ್ಚಿನ ಹಣ ವ್ಯಯಿಸಿದ ಪರಿಣಾಮ ಉತ್ಪಾದನೆಯೂ ಹೆಚ್ಚಳವಾಗುತ್ತಿದೆ. ಕಾಫಿಗೆ ಸೂಕ್ತ ಬೆಲೆ ನಿಗದಿಯಾದರೆ ಮಾತ್ರ ಬೆಳೆಗಾರರು ಕಾಫಿ ಕೃಷಿಗೆ ಹಣವನ್ನು ವ್ಯಯಿಸುತ್ತಾರೆ. ಬೆಲೆಯಲ್ಲಿ ವ್ಯತ್ಯಾಸವಾದರೆ ಬೆಳೆಗಾರರು ಸಾಲಗಾರರಾಗಿ, ತೋಟ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡುವುದಿಲ್ಲ. ಇದರಿಂದ ಉತ್ಪಾದನೆ ಕಡಿಮೆಯಾಗುತ್ತದೆ ಎಂದು ಬೆಳೆಗಾರ ಶಾಂತಳ್ಳಿ ಲೋಕೇಶ್ ಹೇಳಿದರು.
ಮಡಿಕೇರಿ ತಾಲೂಕಿನಲ್ಲಿ 1250 ಹೆಕ್ಟೇರ್‌ನಲ್ಲಿ ಅರೇಬಿಕಾ ಕಾಫಿ ಮತ್ತು 22,956 ಹೆ. ನಲ್ಲಿ ರೊಬಸ್ಟಾ ಕಾಫಿ ಬೆಳೆಯಲಾಗುತ್ತಿದೆ. ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿನಲ್ಲಿ 25,050 ಹೆ.ನಲ್ಲಿ ಅರೇಬಿಕಾ ಮತ್ತು 6870 ಹೆ. ರೊಬಸ್ಟಾ ಬೆಳೆಯಲಾಗುತ್ತಿದೆ. ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನಲ್ಲಿ 1740 ಹೆ.ನಲ್ಲಿ ಅರೇಬಿಕಾ ಮತ್ತು 50,453 ಹೆಕ್ಟೇರ್‌ನಲ್ಲಿ ರೊಬಸ್ಟಾ ಬೆಳೆಯಲಾಗುತ್ತಿದೆ.
ಕೊಡಗು ಜಿಲ್ಲೆ 4,106 ಚದರ ಕಿಲೋಮೀಟರ್ ವ್ಯಾಪ್ತಿ ಹೊಂದಿದ್ದು, 1,197 ಚ.ಕಿ. ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಉತ್ಪಾದನೆಯಾಗುವ ಕಾಫಿಯಲ್ಲಿ ಶೇ.44ರಷ್ಟು ಕೊಡಗಿನಲ್ಲಿ ಉತ್ಪಾದನೆಯಾಗುತ್ತಿದೆ. ಭಾರತದ ಮಟ್ಟಿಗೆ ಶೇ.35ರಷ್ಟು ಕಾಫಿ ಕೊಡಗಿನಲ್ಲಿ ಉತ್ಪಾದನೆಯಾಗುತ್ತಿದೆ. ವಾರ್ಷಿಕ 1,10,730 ಮೆಟ್ರಿಕ್ ಟನ್ ಕಾಫಿ ಕೊಡಗಿನಲ್ಲಿ ಉತ್ಪಾದನೆಯಾಗುತ್ತಿದೆ. ಶೇ.55 ರಷ್ಟು ಕಾರ್ಮಿಕರು ಕಾಫಿ ತೋಟದ ಕಾರ್ಮಿಕರಾಗಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಗುಣಮಟ್ಟದ ಕಾಫಿ ಬೆಳೆಯಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಅರೇಬಿಕಾ ಹಾಗೂ ರೊಬಸ್ಟಾ ಕಾಫಿಗೆ ಬೇಡಿಕೆಯಿದೆ. ಉತ್ತಮ ಹವಾಮಾನದಲ್ಲಿ ಕಾಫಿ ಉತ್ಪಾದನೆಯಾಗುತ್ತಿದೆ. ಬೆಳೆಗಾರರು ಗುಣಮಟ್ಟ ಕಾಯ್ದುಕೊಂಡರೆ ಮುಂದಿನ ದಿನಗಳಲ್ಲೂ ಕಾಫಿಗೆ ಇನ್ನೂ ಉತ್ತಮ ಬೆಲೆ ಸಿಗುತ್ತದೆ. ಬೇಡಿಕೆ ಹೆಚ್ಚಾದರೆ ಬೆಲೆಯೂ ಹೆಚ್ಚಾಗುತ್ತದೆ. ಹಲವು ದಶಕಗಳಿಂದ ಏನೇ ಸಮಸ್ಯೆಯಿದ್ದರೂ ಕೃಷಿಕರು ಕಾಫಿ ಕೃಷಿಯನ್ನು ತ್ಯಜಿಸಿಲ್ಲ. ರೊಬಸ್ಟಾ ಕಾಫಿಗೆ ಬೆಲೆ ಜಾಸ್ತಿಯಾಗಿದೆ. ಆದರೆ ಮಣ್ಣಿಗೆ ಸೂಕ್ತವಾದ ಕಾಫಿ ತಳಿಯ ಆಯ್ಕೆಯಾಗಬೇಕು. ವಿಯೆಟ್ನಾಂ, ಬ್ರೆಜಿಲ್, ಇಂಡೋನೇಷಿಯಾದಲ್ಲಿ ಬೇಡಿಕೆಯಷ್ಟು ಕಾಫಿ ಉತ್ಪಾದನೆಯಾಗುತ್ತಿಲ್ಲ.
ಡಾ.ಚಂದ್ರಶೇಖರ್ ಉಪನಿರ್ದೇಶಕ, ಕಾಫಿ ಮಂಡಳಿ, ಮಡಿಕೇರಿ
ಕಳೆದ ಒಂದು ದಶಕದಿಂದಲೂ ಅಕಾಲಿಕ ಮಳೆಯಿಂದ ಬೆಳೆಗಾರರು ನಿರಂತರ ಫಸಲು ನಷ್ಟ ಅನುಭವಿಸಿ ಸಾಲಗಾರರಾಗಿದ್ದಾರೆ. ಪ್ರಸಕ್ತ ವರ್ಷ ಉತ್ತಮ ಬೆಲೆ ಇದ್ದರೂ ಅದರಿಂದ ಬೆಳಗಾರರ ಸಮಸ್ಯೆ ಬಗೆಹರಿಯುವುದಿಲ್ಲ. ಅತಿವೃಷ್ಟಿಯಿಂದ ಶೇ.40ರಷ್ಟು ಕಾಫಿ ಹಾನಿಯಾಗಿದೆ. ಕಾಫಿ ತೋಟಗಳು ರೋಗಪೀಡಿತವಾಗಿವೆ. ಕಾರ್ಮಿಕರ ಕೊರತೆಯಿಂದ ನಿಗದಿತ ಸಮಯದಲ್ಲಿ ಕೆಲಸ ಮುಗಿಸಲು ಸಾಧ್ಯವಾಗುತ್ತಿಲ್ಲ. ದುಪ್ಪಟ್ಟು ಕೂಲಿ ಕೊಡಲೇಬೇಕಾಗಿದೆ. ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದೆ. ಸಾಲ ಮರುಪಾವತಿ ಕಷ್ಟವಾಗುತ್ತಿದೆ. ಕಾಫಿ ಅವಸಾನದ ಅಂಚಿಗೆ ತಲುಪಲು ಸರ್ಕಾರ ಅವಕಾಶ ಮಾಡಿಕೊಡಬಾರದು. ಕಾಫಿ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಸರ್ಕಾರ ಶೂನ್ಯ ಬಡ್ಡಿದರದಲ್ಲಿ ಸಾಲ ಒದಗಿಸಬೇಕು. ಕಾಫಿ ಬೆಳೆಗಾರರ ಪ್ರಸಕ್ತ ಸಾಲಿನ ಬೆಳೆಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು.
ಮೋಹನ್ ಬೋಪಣ್ಣ ಅಧ್ಯಕ್ಷ, ಸೋಮವಾರಪೇಟೆ ತಾಲೂಕು ಕಾಫಿ ಬೆಳೆಗಾರರ ಸಂಘ.