ಮಾತುಕತೆ ನಡೆಸುವಂತೆ ವಿದೇಶಾಂಗ ಸಚಿವರಿಗೆ ಮನವಿ

ಕಾರವಾರ: ಇರಾನ್​ನಲ್ಲಿ ಬಂಧಿಯಾಗಿರುವ ಉತ್ತರ ಕನ್ನಡದ 18 ಮೀನುಗಾರರನ್ನು ಬಿಡುಗಡೆ ಮಾಡುವ ಸಂಬಂಧ ಕ್ರಮ ವಹಿಸುವಂತೆ ರಾಜ್ಯ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಕೂಡ ಮಾಡಿರುವ ಪರಮೇಶ್ವರ ಅವರು ತೆಹ್ರಾನ್​ನ ರಾಯಭಾರಿಗಳ ಜೊತೆ ರ್ಚಚಿಸುವಂತೆ ವಿನಂತಿಸಿದ್ದಾರೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಿವೇದಿತ ಆಳ್ವಾ ಸಹ ಈ ಸಂಬಂಧ ಸುಷ್ಮಾ ಸ್ವರಾಜ್ ಅವರಲ್ಲಿ ವಿನಂತಿಸಿದ್ದಾರೆ.

ಸ್ಪಂದನೆ: ಜಿಲ್ಲೆಯ ಮೀನುಗಾರರನ್ನು ಬಿಡುಗಡೆ ಮಾಡುವ ಸಂಬಂಧ ವಿದೇಶಾಂಗ ಇಲಾಖೆಗೆ ಮನವಿ ಮಾಡಿದ್ದು, ಅಲ್ಲಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ. ಬುಧವಾರ ಮಾಧ್ಯಮದ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈ ಸಂಬಂಧ ನಿರಂತರ ಫಾಲೋ ಅಪ್ ಮಾಡುವುದಾಗಿ ತಿಳಿಸಿದ್ದಾರೆ.

ಹಿನ್ನೆಲೆ: ದುಬೈ ವೀಸಾದ ಮೇಲೆ ತೆರಳಿದ ಜಿಲ್ಲೆಯ ಭಟ್ಕಳ, ಹೊನ್ನಾವರ ಭಾಗದ 18 ಮೀನುಗಾರರನ್ನು ಕಳೆದ ಜೂನ್ ತಿಂಗಳಿಂದ ಇರಾನ್ ವ್ಯಾಪ್ತಿಯಲ್ಲಿ ಬೋಟ್​ನಲ್ಲಿ ಬಂಧನದಲ್ಲಿಡಲಾಗಿದೆ. ದುಬೈನಿಂದ ಮೀನುಗಾರಿಕೆಗೆ ತೆರಳಿದ ಅವರು ಗಡಿ ನಿಯಂತ್ರಣ ರೇಖೆ ಮೀರಿರುವ ಆರೋಪ ಹೊತ್ತಿದ್ದಾರೆ. ತಮ್ಮನ್ನು ಬಿಡುಗಡೆ ಮಾಡುವಂತೆ ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ವಿನಂತಿ ಮಾಡುತ್ತಿದ್ದಾರೆ.

 ಮೀನು ವ್ಯಾಪಾರಸ್ಥರ ಸಮಸ್ಯೆ ಬಗೆಹರಿಯುವ ಸಾಧ್ಯತೆ 

ಕಾರವಾರ: ಜಿಲ್ಲೆಯ ಹಾಗೂ ಗೋವಾ ಮೀನುಗಾರರು, ಮೀನು ವ್ಯಾಪಾರಸ್ಥರ ನಡುವಿನ ವಿವಾದ ಮುಂದುವರಿದಿದ್ದು, ನ.21 ರಂದು ಗೋವಾ ಆರೋಗ್ಯ ಸಚಿವರ ಸಭೆಯ ಬಳಿಕ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಮೂಡಿದೆ. ಕಳೆದ ಮೂರು ದಿನಗಳಿಂದ ಗೋವಾದಿಂದ ಆಗಮಿಸುವ ನಾಲ್ಕರಿಂದ ಐದು ಮೀನು ತುಂಬಿದ ಲಾರಿಗಳನ್ನು ಬೈತಖೋಲ್​ನಲ್ಲಿ ಹಿಡಿದು ವಾಪಸ್ ಕಳಿಸಲಾಗುತ್ತಿದೆ. ಆಹಾರ ಸುರಕ್ಷತಾ ಪ್ರಾಧಿಕಾರದಲ್ಲಿ ನೋಂದಣಿಯಾಗದ ಹಾಗೂ ನೋಂದಣಿಯಾದರೂ ತೆರೆದ ವಾಹನದಲ್ಲಿರುವ, ಫ್ರೀಜರ್ ಇಲ್ಲದಿರುವ ರಾಜ್ಯದ ಮೀನು ತುಂಬಿದ ಲಾರಿಗಳಿಗೆ ನವೆಂಬರ್ 1ರಿಂದ ಗೋವಾ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಅದಕ್ಕೆ ಪ್ರತಿಯಾಗಿ ಜಿಲ್ಲೆಯ ಮೀನುಗಾರರು ಗೋವಾದ ಮೀನು ತುಂಬಿದ ಲಾರಿಗಳು ಕಾರವಾರದಲ್ಲಿ ಮೀನು ಇಳಿಸಲು ಬಿಡುತ್ತಿಲ್ಲ. ಸಭೆ: ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅವರು ನ. 21 ರಂದು ಭೇಟಿ ಮಾಡಲು ಅವಕಾಶ ನೀಡಿದ್ದು, ಜಿಲ್ಲೆಯ ಮೀನುಗಾರರು ಹಾಗೂ ಮೀನು ವ್ಯಾಪಾರಸ್ಥರು ಸಭೆ ನಡೆಸಲು ಸಜ್ಜಾಗಿದ್ದಾರೆ. ಅವರು ಒಪ್ಪಿಗೆ ಸೂಚಿಸಿದಲ್ಲಿ ವಿವಾದ ಬಗೆಹರಿಯುವ ಸಾಧ್ಯತೆ ಇದೆ.