ಸೆಹ್ವಾಗ್ ಬೇಬಿ ಸಿಟಿಂಗ್​ಗೆ ಟಾಂಗ್ ಕೊಟ್ಟ ಹೇಡನ್!

ನವದೆಹಲಿ: ಟಿಮ್ ಪೇನ್-ರಿಷಭ್ ಪಂತ್ ನಡುವಿನ ಬೇಬಿ ಸಿಟಿಂಗ್ ಸ್ಲೆಡ್ಜಿಂಗ್​ನ ಮುಂದುವರಿದ ಭಾಗವಾಗಿ ಮಾಜಿ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್, ಮುಂಬರುವ ಸೀಮಿತ ಓವರ್ ಸರಣಿಯ ಜಾಹೀರಾತಿನಲ್ಲಿ ಆಸ್ಟ್ರೇಲಿಯನ್ನರ ಕಾಲೆಳೆದಿದ್ದರು. ಇದಕ್ಕೆ ಪ್ರತಿಯಾಗಿ ಆಸೀಸ್ ಮಾಜಿ ಆರಂಭಿಕ ಮ್ಯಾಥ್ಯೂ ಹೇಡನ್ ಕೂಡ ಜಾಹೀರಾತಿನ ಮುಂದುವರಿದ ಭಾಗದಲ್ಲಿ ಕಾಣಿಸಿಕೊಂಡು ಸೆಹ್ವಾಗ್​ಗೆ ಟಾಂಗ್ ನೀಡಿದ್ದಾರೆ. ಹೊಸ ಜಾಹೀರಾತಿನಲ್ಲಿ ಸೆಹ್ವಾಗ್, ಆಸೀಸ್ ಜೆರ್ಸಿ ತೊಟ್ಟ ಮಕ್ಕಳಿಗೆ ಹಾಲಿನ ಬಾಟಲಿ ವಿತರಿಸಿ, ‘ಬೇಗನೆ ಹಾಲು ಕುಡಿಯಿರಿ, ಇಲ್ಲದಿದ್ದರೆ ಕೊಹ್ಲಿ ಬರುತ್ತಾರೆ’ ಎಂದು ಹೇಳುತ್ತಾರೆ. ಆಗ ಮಗುವೊಂದು ಚೆಂಡೆಸೆದು ಸೆಹ್ವಾಗ್ ಕೈಯಲ್ಲಿದ್ದ ಟ್ರೇಯಲ್ಲಿನ ಬಾಟಲಿಗಳನ್ನು ಬೀಳಿಸುತ್ತದೆ. ಆಗ ಪ್ರತ್ಯಕ್ಷರಾಗುವ ಹೇಡನ್, ‘ವೀರೂ ಪಾಜಿ, ಆಸ್ಟ್ರೇಲಿಯನ್ನರನ್ನು ಮಕ್ಕಳೆಂದು ತಿಳಿಯಬೇಡಿ’ ಎಂದು ಹಿಂದಿಯಲ್ಲಿ ಹೇಳುತ್ತಾರೆ.