ಬೆಳಗಾವಿ: ನಗರದಲ್ಲಿ ಮಟ್ಕಾ ಜೂಜಾಟ ನಡೆಸುತ್ತಿದ್ದ ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಳ್ಳದೇ ಮೇಲ್ನೋಟಕ್ಕೆ ಜೂಜಾಟ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂಬದು ಕಂಡು ಬಂದಿರುವುದರಿಂದ ನಗರ ಪೊಲೀಸ್ ಆಯುಕ್ತರು ಇನ್ಸಪೆಕ್ಟರ್ ವಿರುದ್ಧ ದೋಷಾರೋಪಣೆ ಪತ್ರ ಹೊರಡಿಸಿದ್ದಾರೆ.
ಬೆಳಗಾವಿ ಎಪಿಎಂಸಿ ಠಾಣೆಯ ಪಿಐ ಜೆ.ಎಂ.ಕಾಲಿಮಿರ್ಚಿ ಅವರ ವಿರುದ್ಧ ಈ ಆರೋಪಕ್ಕಾಗಿ ಶಿಸ್ತು ಕ್ರಮ ಏಕೆ ಕೈಗೊಳ್ಳಬಾರದು ಎಂಬುದನ್ನು ಏಳು ದಿನಗಳೊಳಗಾಗಿ ವಿವರಣೆ ಸಲ್ಲಿಸುವಂತೆ ಆ.26 ರಂದು ಆಯುಕ್ತ ಬಿ.ಎಸ್.ಲೋಕೇಶಕುಮಾರ್ ದೋಷಾರೋಪಣೆ ಪತ್ರ ಹೊರಡಿಸಿದ್ದಾರೆ.
ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಇದ್ದರೂ ಕ್ರಮ ಜರುಗಿಸದ ಕಾರಣ ಠಾಣಾಧಿಕಾರಿ ಶಾಮೀಲಾಗಿರುವುದು ಕಂಡುಬಂದಿದೆ. ಸ್ಥಳೀಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಆ.25ರಂದು ಕಲಂ ಕೆಪಿ ಆ್ಯಕ್ಟ್ 87ರಡಿ ದಾಖಲಾದ ಅಪರಾಧ ಸಂಖ್ಯೆ 0016/19 ಪ್ರಕರಣ ದಾಖಲಾಗಿದ್ದು, ಏಳು ಜನ ಆರೋಪಿಗಳನ್ನು ಬಂಧಿಸಿ 28,840 ರೂ.ವಶಪಡಿಸಿಕೊಳ್ಳಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಕ್ಸೈಟ್ ರೋಡ್, ಕಲ್ಮೇಶ್ವರ ನಗರ, ಕೆಎಲ್ಇ ಬಾವಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 8 ರಿಂದ ಹತ್ತು ಜನ ಇಸ್ಪೀಟ್ ಆಡದಲ್ಲಿ ತೊಡಗಿದ್ದರೂ ಬೇಜವಾಬ್ದಾರಿ ಹಾಗೂ ನಿಷ್ಕಾಳಜಿ ಪ್ರದರ್ಶಿಸಿದ್ದಕ್ಕೆ ಈ ಕ್ರಮ ಜರುಗಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ತನಿಖೆಯ ಪ್ರಾಥಮಿಕ ಹಂತದಲ್ಲಿ ಎಪಿಎಂಸಿ ಠಾಣೆಯ ಪಿಐ ಜೆ.ಎಂ.ಕಾಲಿಮಿರ್ಚಿಯವರ ಬೇಜವಾಬ್ದಾರಿ ಹಾಗೂ ನಿರ್ಲಕ್ಷತನ ಕಂಡುಬಂದಿದ್ದು, ಕರ್ತವ್ಯಲೋಪ ಆಧಾರದ ಮೇಲೆ ಅವರಿಗೆ ದೋಷಾರೋಪಣೆ ಪತ್ರ ಹೊರಡಿಸಲಾಗಿದೆ. ಹೀಗೆ ಹಲವು ಸಿಬ್ಬಂದಿ ಕರ್ತವ್ಯಲೋಪ ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಅವರ ವಿರುದ್ಧ ಕಾನೂನು ಕ್ರಮಕ್ಕೆ ಸೂಚಿಸಲಾಗಿದೆ.
| ಬಿ.ಎಸ್.ಲೊಕೇಶಕುಮಾರ್, ನಗರ ಪೊಲೀಸ್ ಆಯುಕ್ತ