ಸೊರಬ: ಮನೆಯಿಂದ ಮಠ, ಮಠದಿಂದ ಮನೆಯ ಅವಿನಾಭಾವ ಸಂಬಂಧ ಅರಿತು ನಡೆದಾಗ ಮಠದ ಪರಂಪರೆ, ಸಂಸ್ಕೃತಿ ರಕ್ಷಣೆ ಸಾಧ್ಯ ಎಂದು ಶಿವಮೊಗ್ಗ ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಗೊಗ್ಗೀಹಳ್ಳಿಯ ಪಂಚಮಠ ಸಂಸ್ಥಾನದ ಲಿಂಗೈಕ್ಯ ಶ್ರೀ ನಿಜಗುಣ ಶಿವಾಚಾರ್ಯ ಸ್ವಾಮೀಜಿ ಅವರ 18ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಸಮಾಜಕ್ಕೆ ಮಠ ಪರಂಪರೆ ಅಗತ್ಯ. ಮಠಗಳು ಸಮಾಜಕ್ಕೆ ಒಳಿತಾಗುವ ಮಾರ್ಗದರ್ಶನ ನೀಡುವಂತಿರಬೇಕು. ಮಠಗಳಲ್ಲಿ ಅಧ್ಯಾತ್ಮದ ಪರಂಪರೆ ಮುಂದುವರಿದಿದೆ ಎಂದು ತಿಳಿಸಿದರು.
ಮಠ ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಾನಗಲ್ ಕುಮಾರಸ್ವಾಮಿಗಳು ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಮಠಗಳನ್ನು ರಕ್ಷಿಸದಿದ್ದರೆ ಸಮಾಜಕ್ಕೆ ಒಳಿತಾಗುವುದಿಲ್ಲ. ಮಠಗಳು ಸಮಾಜದ ತಾಯಿ ಬೇರುಗಳಿದ್ದಂತೆ, ನಶಿಸುತ್ತಿರುವ ಮಠ ಪರಂಪರೆ ಪುನರುತ್ಥಾನ ಮಾಡುವಲ್ಲಿ ಕುಮಾರಸ್ವಾಮಿ ಪಾತ್ರ ಹಿರಿದಾಗಿದೆ ಎಂದರು.
ಕೆಳದಿ ಅರಸರ ಕಾಲದಲ್ಲಿ ಗೊಗ್ಗೀಹಳ್ಳಿ, ಕಾಳೇನಹಳ್ಳಿ ಮಠಗಳು ಸರ್ವಧರ್ಮದ ಸಮನ್ವಯತೆ ಕಾಪಾಡಿಕೊಂಡಿದ್ದವು. ಪಂಚ ಮಠಗಳಲ್ಲಿ ಗೊಗ್ಗೀಹಳ್ಳಿ ಮಠವೂ ಒಂದು. ಸಂಸ್ಕಾರ ಉಳಿವಿನ ಧ್ಯೇಯದೊಂದಿಗೆ ಹಿರಿಯ ಗುರುಗಳ ಪುಣ್ಯ ಸ್ಮರಣೋತ್ಸವ ಆಚರಿಸುತ್ತಿರುವುದು ಅರ್ಥಪೂರ್ಣ ಎಂದು ತಿಳಿಸಿದರು.
ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಮಾತನಾಡಿ, ಸದಾಕಾಲ ಲಿಂಗಪೂಜೆ, ಒಳ್ಳೆಯ ಚಿಂತನೆ, ಸದ್ವಿಚಾರ, ಗುರು ಜಂಗಮ ಸೇವೆ, ಭಕ್ತರೊಂದಿಗಿನ ಒಡನಾಟ ಶ್ರೀಗಳ ಜೀವನ ಆಗಿದ್ದವು. ಹಿರಿಯರ ಬದುಕು ನಮಗೆ ಮಾದರಿಯಾಗಬೇಕು ಎಂದು ಹೇಳಿದರು.
ಗೊಗ್ಗೀಹಳ್ಳಿ ಪಂಚಮಠದ ಸಂಗಮೇಶ್ವರ ಶ್ರೀ, ತೊಗರ್ಸಿ ಮಹಾಂತ ದೇಶಿಕೇಂದ್ರ ಶ್ರೀ, ಶಿರಾಳಕೊಪ್ಪದ ಸಿದ್ದೇಶ್ವರ ಶ್ರೀ, ತೊಗರ್ಸಿ ಚನ್ನವೀರ ದೇಶಿಕೇಂದ್ರ ಶ್ರೀ, ಜಡೆ ಹಿರೇಮಠದ ಘನಬಸವ ಅಮರೇಶ್ವರ ಶ್ರೀ, ಜಡೆ ಮಠದ ಮಹಾಂತ ಶ್ರೀ, ಸಾಲೂರು ಮಠದ ಗುರುಲಿಂಗ ಶ್ರೀ, ಗೇರುಕೊಪ್ಪದ ಶಿವಲಿಂಗ ಶ್ರೀ, ಕ್ಯಾಸನೂರು ಗುರುಬಸವ ಶ್ರೀ, ಕೋಣಂದೂರು ಶ್ರೀಪತಿ ಪಂಡಿತಾರಾಧ್ಯ ಶ್ರೀ, ಹಿರೇಮಾಗಡಿ ಶಿವಮೂರ್ತಿ ಮುರುಘರಾಜೇಂದ್ರ ಶ್ರೀ, ಮೂಡಿ ಮಠದ ಸದಾಶಿವ ಶ್ರೀ, ಹಾರನಹಳ್ಳಿ ನೀಲಕಂಠ ಶ್ರೀ, ಗುತ್ತಲ ಅಕ್ಕಿಆಲೂರು, ಕೂಡಲ, ಉದ್ಯಮಿ ನಾಗರಾಜ್ ಗುತ್ತಿ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಮಧ್ಯ ಕರ್ನಾಟಕದ ಅಧ್ಯಕ್ಷ ವೀರೇಗೌಡ, ನಿಜಗುಣ ಚಂದ್ರಶೇಖರ್, ನಟರಾಜ್, ರೇಣುಕಮ್ಮ ಗೌಳಿ ಇತರರಿದ್ದರು.