ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಾಮಾಣಿಕ ಯತ್ನ

ಶೃಂಗೇರಿ: ಐದು ವರ್ಷದ ಅವಧಿಯಲ್ಲಿ ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡಿದ್ದೇನೆ. ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ ಎಂದು ಪಪಂ ನಿರ್ಗಮಿತ ಅಧ್ಯಕ್ಷೆ ಶಾರದಾ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಅಧ್ಯಕ್ಷ ಸ್ಥಾನದ ಅವಧಿ ಮುಗಿದಿದೆ. ಸಾಧಿಸಬೇಕಾದ್ದು ಬಹಳಷ್ಟಿದೆ. ಅದನ್ನು ಮುಂಬರುವ ಸದಸ್ಯರು ಸಾಧಿಸುವ ಭರವಸೆ ಇದೆ. ನಮ್ಮ ಪ್ರತಿಯೊಂದು ಸೇವಾ ಕಾರ್ಯಕ್ಕೆ ಶ್ರೀಮಠ ನೀಡಿದ ಕೊಡುಗೆ ಅನನ್ಯ ಎಂದರು.

ಪಪಂ ನೂತನ ಕಚೇರಿ ಸುಸಜ್ಜಿತವಾಗಿದೆ. ನಗರೋತ್ಥಾನ ಯೋಜನೆಯಡಿ ರಸ್ತೆ ಮತ್ತು ಚರಂಡಿ ಕಾಮಗಾರಿ ಮಾಡಲಾಗಿದೆ. ಶ್ರೀಮಠದಿಂದ ಬಸ್ ನಿಲ್ದಾಣದ ಹರಿಹರ ಬೀದಿಯನ್ನು ಕಾಂಕ್ರಿಟೀಕರಣಗೊಳಿಸಲಾಗಿದೆ. ಹನುಮಂತನಗರದ ಎಲ್ಲ ರಸ್ತೆಯೂ ಡಾಂಬರಿಕರಣಗೊಂಡಿವೆ. ಮಳೆಗಾಲದಲ್ಲಿ ಸಂಚಾರಕ್ಕೆ ಅಡಚಣೆಯಾಗುತ್ತಿದ್ದ ಮೆಸ್ಕಾಂ ಎದುರಿನ ರಸ್ತೆಯನ್ನು ಎತ್ತರಿಸಿ, ಕಾಂಕ್ರಿಟೀಕರಣಗೊಳಿಸಲಾಗಿದೆ. ಕೆವಿಆರ್ ರಸ್ತೆಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಅತಿವೃಷ್ಟಿ ಯೋಜನೆಯಡಿ 1.19 ಕೋಟಿ ರೂ. ಮಂಜೂರಾಗಿದೆ. ಧರೆ ಕುಸಿತದ ಸ್ಥಳಗಳಿಗೆ ರಿಟೈನ್​ವಾಲ್ ನಿರ್ವಿುಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಪಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಜ್ಯೋತಿ ರಾಘವೇಂದ್ರ ಮಾತನಾಡಿ, ನಿವೇಶನಕ್ಕಾಗಿ 263 ಅರ್ಜಿಗಳು ಬಂದಿವೆ. ಆದರೆ ಸರ್ಕಾರಿ ಜಮೀನು ಲಭ್ಯವಿಲ್ಲದ್ದರಿಂದ ಫಲಾನುಭವಿಗಳಿಗೆ ನಿವೇಶನ ನೀಡಲು ಸಾಧ್ಯವಾಗಿಲ್ಲ. ಖಾಸಗಿ ಜಮೀನು ಖರೀದಿಗೆ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.

ನಾಗೇಶ್ ಕಾಮತ್, ಟಿ.ಕೆ.ಪರಾಶರ, ಸುರೇಶ್, ಸುಮಾ ಸೋಮಶೇಖರ್, ಶೋಭಾ, ಸುಜಾತಾ, ಡಾ. ಲಕ್ಷ್ಮೀ, ಬಿ.ಎನ್.ಕೃಷ್ಣ, ಮುಖ್ಯಾಧಿಕಾರಿ ರವಿಕುಮಾರ್ ಇತರರಿದ್ದರು.

ಪಪಂ ಕಚೇರಿಗೆ ಶ್ರೀಗಳು ಭೇಟಿ

ಪಪಂ ನೂತನ ಕಟ್ಟಡ ಶ್ರೀ ಚಂದ್ರಶೇಖರಭಾರತೀ ಸಭಾಂಗಣಕ್ಕೆ ಗುರುವಾರ ಭೇಟಿ ನಿಡಿದ್ದ ಶ್ರೀಮಠದ ಜಗದ್ಗುರು ಶ್ರೀ ಭಾರತೀತೀರ್ಥ ಅವರನ್ನು ಪೂರ್ಣಕುಂಭದೊಂದಿಗೆ ಮುಖ್ಯಾಧಿಕಾರಿ ರವಿಕುಮಾರ್, ಪಪಂ ಸದಸ್ಯರು ಸ್ವಾಗತಿಸಿದರು. ಪ್ರಾಂಗಣದಲ್ಲಿ ಅಳವಡಿಸಿದ ಶ್ರೀ ಚಂದ್ರಶೇಖರಭಾರತೀ ಅವರು 1938ರಲ್ಲಿ ಕಟ್ಟಡ ಉದ್ಘಾಟಿಸಿದ ಫಲಕ ವೀಕ್ಷಿಸಿದರು. ಸಭಾಂಗಣದಲ್ಲಿ ಸ್ಥಾಪಿಸಲಾದ ಶ್ರೀ ಚಂದ್ರಶೇಖರಭಾರತೀ ಸ್ವಾಮೀಜಿ ಅವರ ದಿವ್ಯಮೂರ್ತಿ ಎದುರಿಗೆ ಇಟ್ಟಿರುವ ದೀಪ ಕಂಬಕ್ಕೆ ಜ್ಯೋತಿ ಬೆಳಗಿಸಿದರು. ಬಳಿಕ ಭವ್ಯಮೂರ್ತಿಗೆ ಹೂವಿನಹಾರ, ರುದ್ರಾಕ್ಷಿಮಾಲೆ ಹಾಕಿ ನಮಿಸಿದರು. ಪಪಂ ಅಧಿಕಾರಿಗಳು, ಸಿಬ್ಬಂದಿ, ಸದಸ್ಯರು, ಪೌರಕಾರ್ವಿುಕರಿಗೆ ಫಲಗಳನ್ನು ನೀಡಿ ಆರ್ಶೀವದಿಸಿದರು. ಆಪ್ತ ಸಹಾಯಕ ಕೃಷ್ಣಮೂರ್ತಿ ಇತರರಿದ್ದರು.