ಜಗಳೂರು: ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳ ಜ್ಞಾನವೃದ್ಧಿಗಾಗಿ ಗಣಿತ ಸ್ಪರ್ಧೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಶಿಕ್ಷಕ ಗೋವಿಂದಪ್ಪ ಹೇಳಿದರು.
ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದಲ್ಲಿ ಗುರುವಾರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮುದಾಯ, ಅಕ್ಷರ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶಾಲಾ ಮಕ್ಕಳ ಗಣಿತ ಸ್ಪರ್ಧಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಣಿತದಲ್ಲಿ ಯಶಸ್ವಿಯಾದರೆ ನಾವು ಜೀವನದಲ್ಲಿ ಯಶಸ್ವಿಯಾದಂತೆ. ನಿತ್ಯ ಜೀವನ ಅರಂಭವಾಗುವುದೇ ಲೆಕ್ಕಾಚಾರದಿಂದ. ಹಾಗಾಗಿ, ಗಣಿತ ಕಬ್ಬಿಣದ ಕಡಲೆ ಎಂಬ ಭಯ ಹೋಗಲಾಡಿಸುವ ಉದ್ದೇಶದಿಂದ ಗ್ರಾಪಂ ವ್ಯಾಪ್ತಿಯಲ್ಲಿ ಇಂತಹ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಸ್ಪರ್ಧೆಯಲ್ಲಿ ಹುಚ್ಚವ್ವನಹಳ್ಳಿ ಸ.ಹಿ. ಶಾಲೆ 5ನೇ ತರಗತಿ ವಿದ್ಯಾರ್ಥಿ ಬಿ.ಟಿ. ನಂದನ್, 4ನೇ ತರಗತಿ ವಿದ್ಯಾರ್ಥಿನಿ ಎ.ವೈ. ದೀಕ್ಷಾ ಪ್ರಥಮ ಸ್ಥಾನ ಪಡೆದರು. 6ನೇ ತರಗತಿ ವಿದ್ಯಾರ್ಥಿನಿ ಎಚ್.ಎಸ್. ರಂಜಿತಾ ದ್ವಿತೀಯ ಸ್ಥಾನ ಹಾಗೂ 4ನೇ ತರಗತಿ ವಿದ್ಯಾರ್ಥಿನಿ ಬಿ.ಟಿ. ಹರ್ಷಿತಾ ತೃತೀಯ ಸ್ಥಾನ ಪಡೆದರು. ಗ್ರಾಪಂ ಅಧ್ಯಕ್ಷ ಶ್ರೀನಿವಾಸ್ ಸ್ಪರ್ಧೆಯಲ್ಲಿ ಗೆದ್ದ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಕೊಟ್ರೇಶ್, ಸಹ ಶಿಕ್ಷಕರಾದ ರಾಜು, ನಾಗಲಕ್ಷ್ಮಮ್ಮ, ಸಮೂಹ ಸಂಪನ್ಮೂಲ ವ್ಯಕ್ತಿ ನಿಂಗಪ್ಪ ಮತ್ತಿತರರಿದ್ದರು.