ಹೆರಿಗೆ ರಜೆ ಸಂಬಳಕ್ಕೆ ತೆರಿಗೆ ಇಲ್ಲ!

ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅನೇಕ ಜನಪರ ಯೋಜನೆಗಳನ್ನು ಘೋಷಿಸುತ್ತಿರುವ ಕೇಂದ್ರ ಸರ್ಕಾರ, ಫೆ. 1ರಂದು ಮಂಡನೆಯಾಗಲಿರುವ ಮಧ್ಯಂತರ ಬಜೆಟ್​ನಲ್ಲಿ ಹೆರಿಗೆ ರಜೆಯಲ್ಲಿ ಪಡೆಯುವ ಸಂಬಳಕ್ಕೆ ತೆರಿಗೆ ವಿನಾಯಿತಿ ಘೋಷಿಸುವ ಸಾಧ್ಯತೆ ಇದೆ. ಈ ಮೂಲಕ ಉದ್ಯೋಗಸ್ಥ ಮಹಿಳೆಯರ ಬೆಂಬಲ ಗಳಿಸಲು ಬಿಜೆಪಿ ಬಯಸಿದೆ ಎಂದು ವಿಶ್ಲೇಷಿಸಲಾಗಿದೆ.

ಕಾರ್ವಿುಕ ಸಚಿವಾಲಯ ಸಲ್ಲಿಸಿರುವ ಈ ಪ್ರಸ್ತಾವನೆಯನ್ನು ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. 2017ರಲ್ಲಿ ಹೆರಿಗೆ ಸೌಲಭ್ಯ ಕಾಯ್ದೆಗೆ ತಿದ್ದುಪಡಿ ಮಾಡಿದ ಸರ್ಕಾರ, 12 ವಾರ ಇದ್ದ ಸಂಬಳ ಸಹಿತ ಹೆರಿಗೆ ರಜೆಯನ್ನು 26 ವಾರಕ್ಕೆ ಏರಿಸಿತ್ತು. ಕಡಿಮೆ ಸಂಬಳ ಪಡೆಯುವ ಮಹಿಳೆಯರಿಗೂ 26 ವಾರಗಳ ಹೆರಿಗೆ ರಜೆ ಸಿಗುವಂತೆ ಮಾಡಲು ಕಾರ್ವಿುಕ ಸಚಿವಾಲಯ ಕೆಲವು ಉತ್ತೇಜಕ ಕ್ರಮಗಳನ್ನು ಈ ಹಿಂದೆ ಪ್ರಸ್ತಾಪಿಸಿತ್ತು.