ಬೆಂಕಿಪೊಟ್ಟಣ ಕಾರ್ಖಾನೆ ಬಳಿ ಅಗ್ನಿ ಅವಘಡ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿರುವ ಬೆಂಕಿಪೊಟ್ಟಣ ಕಾರ್ಖಾನೆ ಬಳಿ ಬುಧವಾರ ತ್ಯಾಜ್ಯಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಗುಡ್ಡೆಗೂ ಬೆಂಕಿ ವ್ಯಾಪಿಸಿದ್ದು, ಅಗ್ನಿಶಾಮಕದಳ ಹಾಗೂ ಸ್ಥಳೀಯರು ಬೆಂಕಿ ನಂದಿಸುವ ಮೂಲಕ ಸಂಭಾವ್ಯ ಅನಾಹುತ ತಪ್ಪಿದೆ.

ಸೂಕ್ತ ಮುನ್ನೆಚ್ಚರಿಕೆಯಿಲ್ಲದೆ ಕಾರ್ಖಾನೆ ನಡೆಸುತ್ತಿದ್ದು, ಪಕ್ಕದಲ್ಲೇ ಪೆಟ್ರೋಲ್ ಬಂಕ್ ಹಾಗೂ ಇತರ ವಾಣಿಜ್ಯ ಸಂಕೀರ್ಣಗಳು ಇದ್ದು, ಸಕಾಲದಲ್ಲಿ ಬೆಂಕಿ ನಂದಿಸದಿದ್ದರೆ ಪೆಟ್ರೋಲ್ ಬಂಕ್‌ಗೂ ಬೆಂಕಿ ವ್ಯಾಪಿಸುವ ಸಾಧ್ಯತೆಯಿತ್ತು. ಫ್ಯಾಕ್ಟರಿ ಸುತ್ತಮುತ್ತ ತ್ಯಾಜ್ಯಗಳನ್ನು ವಿಲೇವಾರಿ ಮಾಡದಿರುವುದೇ ಬೆಂಕಿ ಕಾಣಿಸಿಕೊಳ್ಳಲು ಕಾರಣ ಎಂದು ಅಗ್ನಿಶಾಮಕದಳ ಸಿಬ್ಬಂದಿ ತಿಳಿಸಿದ್ದಾರೆ.

5ಬೆಂಕಿ ರಭಸಕ್ಕೆ ಅಗ್ನಿಶಾಮಕದಳದ ನೀರು ಕಡಿಮೆಯಾದ ಕಾರಣ ಸ್ಥಳೀಯರು ನೀರು ತಂದು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಬೆಂಕಿಪೊಟ್ಟಣ ಕಾರ್ಖಾನೆ ಮಾಲೀಕ ಸಜೀವನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಫ್ಯಾಕ್ಟರಿ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು. ಅಗ್ನಿ ನಿಯಂತ್ರಣ ಉಪಕರಣವಿಲ್ಲದೆ ಫ್ಯಾಕ್ಟರಿ ನಡೆಸುತ್ತಿದ್ದು, ಕೂಡಲೇ ಅಳವಡಿಸುವಂತೆ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.