ಮಾತಾ ಅಮೃತಾನಂದಮಯಿ ಎದುರು ಧರಣಿ

ಮೈಸೂರು: ಶ್ರೀಮಾತಾ ಅಮೃತಾನಂದಮಯಿ ಅವರ ಸುಪರ್ದಿಯಲ್ಲಿರುವ ಡಾ.ಗಣೇಶ್ ಉಡುಪ ಅವರನ್ನು ಮನೆಗೆ ಕಳುಹಿಸಿಕೊಡುವಂತೆ ಅಳಲು ತೋಡಿಕೊಂಡಿರುವ ಅವರ ಕುಟುಂಬದ ಸದಸ್ಯರು, ಮೈಸೂರಿಗೆ ಬಂದಿರುವ ಮಾತಾ ಅಮೃತಾನಂದಮಯಿ ಎದುರು ಫೆ.20 ರಂದು ಧರಣಿ ನಡೆಸಲು ನಿರ್ಧರಿಸಿದ್ದಾರೆ.

ದಾವಣಗೆರೆ ಮೂಲದ ಡಾ.ಗಣೇಶ್ ಅವರನ್ನು ಅಮೃತಾನಂದಮಯಿ ವಶೀಕರಣ ಮಾಡಿದ್ದು, ಇದರಿಂದ 15 ವರ್ಷಗಳಿಂದ ಅವರ ಸಂಸ್ಥೆಯಲ್ಲಿ ಸೇವೆ ಮಾಡುತ್ತಾ ಅವರ ಆಶ್ರಮದಲ್ಲೇ ನೆಲೆಗೊಂಡಿದ್ದಾರೆ. ವೃದ್ಧಾಪ್ಯದಲ್ಲಿರುವ ತಂದೆ-ತಾಯಿ ಜವಾಬ್ದಾರಿಯನ್ನು ಮಗ ಹೊರಬೇಕು. ಆದರೆ, ಈ ಹೊಣೆಗಾರಿಕೆಯಿಂದ ಡಾ.ಗಣೇಶ್ ವಿಮುಕ್ತರಾಗಲು ಯತ್ನಿಸಿದ್ದಾರೆ ಎಂದು ಅವರ ಕುಟುಂಬದ ಸದಸ್ಯರಾದ ಡಾ.ಶ್ರೀಧರ್ ಉಡುಪ, ಡಾ.ಎ.ರಾಘವೇಂದ್ರ ಉಡುಪ, ಮಾಲತಿ ಉಡುಪ, ಉದಯ್ ಉಡುಪ ಸುದ್ದಿಗೋಷ್ಠಿಯಲ್ಲಿ ದೂರಿದರು.

ಅಮೃತಾನಂದಮಯಿ ಅವರು ಅವರ ತಲೆಕೆಡಿಸಿ ತಮ್ಮ ಸೇವೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಎಂ.ಟೆಕ್, ಪಿಎಚ್‌ಡಿ ಮಾಡಿರುವ ಡಾ.ಗಣೇಶ್, ವಿದೇಶದಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ ಖ್ಯಾತರಾಗಿದ್ದರು. ಇಂಥವರು ಈ ಸಂಸ್ಥೆಯ ಬೆಳವಣಿಗೆಗೆ ಮಾನವ ಸಂಪನ್ಮೂಲವಾಗಿದ್ದು, ಇವರನ್ನು ಉಪಾಯದಿಂದ ಸೆಳೆದು ತಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ತಂದೆ ಅನಂದರಾಮ್ ಉಡುಪ ಹಾಸಿಗೆ ಹಿಡಿದಾಗ ಅಮೃತಾನಂದಮಯಿ ಅವರನ್ನು ಕಾಡಿಬೇಡಿ ಡಾ.ಗಣೇಶ್ ಅವರನ್ನು ಮನೆಗೆ ಕರೆದುಕೊಂಡು ಬಂದಿದ್ದೆವು. ಕೆಲ ದಿನಗಳ ಬಳಿಕ ಮತ್ತೆ ಆಶ್ರಮಕ್ಕೆ ಹೋದವರು ವಾಪಸ್ ಬಂದಿಲ್ಲ. ಇದೀಗ ತಾಯಿ ಸುಶೀಲಮ್ಮ ಕೂಡ ಹಾಸಿಗೆ ಹಿಡಿದಿದ್ದಾರೆ. ಆದ್ದರಿಂದ ಅವರನ್ನು ಮನೆಗೆ ಕಳುಹಿಸಿಕೊಡಬೇಕು ಎಂದು ಆಗ್ರಹಿಸಿದರು.