ಗಂಗೊಳ್ಳಿಯಲ್ಲಿ ಮತ್ಸ್ಯಕ್ಷಾಮ

ಗಂಗೊಳ್ಳಿ: ಸಮೃದ್ಧ ಮೀನುಗಾರಿಕೆ ನಡೆಸುತ್ತಿದ್ದ ಜಿಲ್ಲೆಯ ಪ್ರಮುಖ ಮೀನುಗಾರಿಕಾ ಬಂದರು ಪ್ರದೇಶ ಗಂಗೊಳ್ಳಿಯಲ್ಲಿ ಮೀನುಗಾರರು ಮತ್ಸ್ಯಕ್ಷಾಮ ಭೀತಿ ಎದುರಿಸುತ್ತಿದ್ದು, ಮೀನುಗಾರಿಕೆ ನಂಬಿಕೊಂಡ ಎಲ್ಲ ಉದ್ಯಮಗಳಿಗೆ ಹೊಡೆತ ಬಿದ್ದಿದೆ. ಮಂಜುಗಡ್ಡೆ, ವಾಹನ ಚಾಲಕರು, ಮೀನು ಮಾರಾಟಗಾರರು, ಕಾರ್ಮಿಕರು ಸಂಕಷ್ಟದಲ್ಲಿದ್ದು, ಎರಡು ತಿಂಗಳಿಂದ ಮೀನುಗಾರಿಕೆ ಇಲ್ಲದೆ ಜೀವನ ನಡೆಸಲು ಹರಸಾಹಸ ಪಡುತ್ತಿದ್ದಾರೆ.
ಕಳೆದ ಹಲವು ಮೀನುಗಾರಿಕಾ ಋತುಗಳಲ್ಲಿ ಮತ್ಸ್ಯಕ್ಷಾಮ ಕಾಡಿತ್ತಾದರೂ, ಈ ಬಾರಿ ಅದಕ್ಕಿಂತ ಹೆಚ್ಚಾಗಿರುವುದು ಮೀನುಗಾರರನ್ನು ಕಂಗೆಡಿಸಿದೆ. ಉತ್ತಮ ಮೀನುಗಾರಿಕೆ ನಡೆಯಬೇಕಿದ್ದ ಇಂದಿನ ದಿನಗಳಲ್ಲಿ ಮೀನುಗಾರಿಕೆ ಇಲ್ಲದಿರುವುದು ಬಡ ಮೀನುಗಾರ ಕುಟುಂಬಗಳನ್ನು ಚಿಂತೆಗೀಡು ಮಾಡಿದೆ. ಆರಂಭದಲ್ಲಿ ಉತ್ತಮ ಮೀನುಗಾರಿಕೆ ನಡೆದಿತ್ತು.

ಲೈಟ್ ಫಿಶಿಂಗ್ ಕಾರಣ: ಅವ್ಯಾಹತವಾಗಿ ನಡೆಯುತ್ತಿರುವ ಆಳ ಸಮುದ್ರ ಮೀನುಗಾರಿಕೆ ಮತ್ತು ಲೈಟ್ ಫಿಶಿಂಗ್‌ನಿಂದಾಗಿ ಸಾಂಪ್ರದಾಯಿಕ ಮೀನುಗಾರಿಕೆಗೆ ತೊಂದರೆಯಾಗಿದೆ. ಇಂತಹ ಮೀನುಗಾರಿಕೆ ಮತ್ಸ್ಯ ಸಂತತಿ ಅಳಿಯಲು ಕಾರಣವಾಗುತ್ತಿದೆ ಎನ್ನುತ್ತಾರೆ ಸ್ಥಳೀಯ ಮೀನುಗಾರರು. 2-3 ವರ್ಷಗಳಿಂದ ಈ ರೀತಿಯ ಮೀನುಗಾರಿಕೆ ವ್ಯಾಪಕವಾಗಿ ನಡೆದ ಪರಿಣಾಮ ಮತ್ಸ್ಯ ಸಂತತಿ ನಶಿಸಿ ಹೋಗಿದೆ. ಇನ್ನೊಂದೆಡೆ ಡೀಸೆಲ್, ಸೀಮೆಎಣ್ಣೆ ಸಬ್ಸಿಡಿ ಸಮಸ್ಯೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜತೆಗೆ ಮತ್ಸ್ಯೋದ್ಯಮ ಪೂರಕ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿರುವುದು ಮತ್ಸ್ಯೋದ್ಯಮದ ಮೇಲೆ ಕರಿಛಾಯೆ ಬಿದ್ದಂತಾಗಿದೆ.
ಗಂಗೊಳ್ಳಿ ಬಂದರಿನಲ್ಲಿ ಸುಮಾರು 50 ಕ್ಕೂ ಮಿಕ್ಕಿ ಪರ್ಸಿನ್ ಬೋಟುಗಳು, 200ಕ್ಕೂ ಮಿಕ್ಕಿ ಟ್ರಾಲ್ ಬೋಟುಗಳು, 500ಕ್ಕೂ ಮಿಕ್ಕಿ ನಾಡದೋಣಿಗಳು ಮೀನುಗಾರಿಕೆ ನಡೆಸುತ್ತಿವೆ. ಗಂಗೊಳ್ಳಿ ಸುತ್ತಮುತ್ತಲಿನ ಪ್ರದೇಶಗಳ ಸುಮಾರು 3-4 ಸಾವಿರ ಮಂದಿ ಮೀನುಗಾರರು ಮೀನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಕೇರಳ, ಗೋವಾ, ಮಹಾರಾಷ್ಟ್ರ, ತಮಿಳುನಾಡು ಮೊದಲಾದ ಕಡೆಗೆ ಮೀನುಗಳನ್ನು ರಫ್ತು ಮಾಡಲಾಗುತ್ತಿದೆ. ಆದರೆ ಗಂಗೊಳ್ಳಿ ಬಂದರಿನಲ್ಲಿ ಆವರಿಸುತ್ತಿರುವ ಮತ್ಸ್ಯಕ್ಷಾಮ ಮೀನುಗಾರರನ್ನು ಹಾಗೂ ಮೀನುಗಾರಿಕೆಯನ್ನು ನಂಬಿಕೊಂಡಿರುವ ಕುಟುಂಬಗಳನ್ನು ಆತಂಕಕ್ಕೆ ತಳ್ಳಿದೆ.

ಮೂರು ತಿಂಗಳಿನಲ್ಲಿ ಮೀನುಗಾರಿಕಾ ಋತು ಅಂತ್ಯಗೊಳ್ಳಲಿದ್ದು, ಈ ಸಮಯದಲ್ಲಿ ಉತ್ತಮ ಮೀನುಗಾರಿಕೆ ನಡೆಯಲಿ ಎಂಬುದು ಎಲ್ಲರ ಹಾರೈಕೆ.

ಗಂಗೊಳ್ಳಿಯಲ್ಲಿ ಮೀನುಗಾರಿಕೆ ಇಲ್ಲದೆ ಜೀವನ ನಡೆಸಲು ಬಹಳ ಕಷ್ಟವಾಗುತ್ತಿದೆ. ವಿವಿಧ ಬ್ಯಾಂಕು ಹಾಗೂ ಸಂಘಗಳಿಂದ ಪಡೆದ ಸಾಲ ಮರುಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಮೀನುಗಾರಿಕೆಗೆ ತೆರಳಿದ ಬೋಟುಗಳು ಖಾಲಿಯಾಗಿ ದಡ ಸೇರುತ್ತಿವೆ. ಮೀನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿರುವ ನಾವೆಲ್ಲ ಸಂಕಷ್ಟಕ್ಕೆ ಸಿಲುಕಿದ್ದೇವೆ.
ಮೋಹಿನಿ ಖಾರ್ವಿ, ಮೀನುಗಾರ ಮಹಿಳೆ

ಎರಡು ತಿಂಗಳಿನಿಂದ ಗಂಗೊಳ್ಳಿ ಬಂದರು ಮೀನುಗಾರಿಕೆ ಇಲ್ಲದೆ ಬಿಕೋ ಎನ್ನುತ್ತಿದೆ. ದೈನಂದಿನ ಖರ್ಚು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ಅವೈಜ್ಞಾನಿಕ ಮೀನುಗಾರಿಕಾ ಕ್ರಮದಿಂದ ಮತ್ಸ್ಯ ಸಂತತಿ ನಾಶವಾಗುತ್ತಿದೆ. ಸಾಂಪ್ರದಾಯಿಕ ಮೀನುಗಾರಿಕೆಗೆ ಬಲವಾದ ಹೊಡೆತ ಬಿದ್ದಿದ್ದು, ಮತ್ಸ್ಯ ಸಂತತಿ ರಕ್ಷಣೆಗೆ ಸೂಕ್ತ ಕ್ರಮಕೈಗೊಳ್ಳಬೇಕು.
ಪ್ರೇಮಾ ಕಾಂಚನ್, ಮೀನುಗಾರ ಮಹಿಳೆ, ಕೋಡಿ

ಎರಡು ತಿಂಗಳಿನಿಂದ ಗಂಗೊಳ್ಳಿ ಬಂದರಿನಲ್ಲಿ ಮೀನುಗಾರಿಕೆ ಬಹುತೇಕ ಸ್ಥಗಿತಗೊಂಡಿದೆ. ಮೀನುಗಾರಿಕೆಗೆ ಹೊಡೆತ ಬಿದ್ದಿರುವುದರಿಂದ ಮೀನುಗಾರಿಕೆಯನ್ನು ನಂಬಿಕೊಂಡ ನೂರಾರು ಕುಟುಂಬಗಳು, ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿವೆ. ಮೀನುಗಾರಿಕೆ ಇಲ್ಲದೆ ಗಂಗೊಳ್ಳಿಯಲ್ಲಿ ವ್ಯಾಪಾರ ವಹಿವಾಟು ಕ್ಷೀಣಿಸುತ್ತಿದೆ. ಈ ಬಾರಿ ನಿರೀಕ್ಷಿತ ಪ್ರಮಾಣದ ಮೀನುಗಾರಿಕೆ ನಡೆಯದಿರುವುದರಿಂದ ಮೀನುಗಾರರು ಆತಂಕಿತರಾಗಿದ್ದಾರೆ.
ರಾಮಪ್ಪ ಖಾರ್ವಿ, ಮೀನುಗಾರ, ಗಂಗೊಳ್ಳಿ