Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಜೋಶ್​ ಜತೆ ಹೋಷ್​ ಇರಲಿ

Wednesday, 04.07.2018, 3:04 AM       No Comments

ದೇಶದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾದಂತೆ ಅಪಘಾತಗಳ ಪ್ರಮಾಣವೂ ಏರಿಕೆಯಾಗುತ್ತಿದೆ. ಅದಕ್ಕೆ ಕಾರಣ ಏರುತ್ತಿರುವ ವಾಹನಗಳ ಸಂಖ್ಯೆ ಅಲ್ಲ. ಬದಲಿಗೆ ರಸ್ತೆ ನಿಯಮಗಳ ಉಲ್ಲಂಘನೆ. ವಾಹನ ಚಾಲಕರ ಈ ರೀತಿಯ ವರ್ತನೆಗೆ ಕಾರಣಗಳೇನು? ಪರಿಹಾರೋಪಾಯ ಗಳೇನು? ಈ ನಿಟ್ಟಿನಲ್ಲಿ ಯುವಜನರ ಜವಾಬ್ದಾರಿಗಳೇನು? ಆ ಕುರಿತು ಒಂದು ಅವಲೋಕನ.

| ಮಲ್ಲಿಕಾರ್ಜುನ ತಳವಾರ ಬೆಳಗಾವಿ

ನಗರವೊಂದರ ಜನನಿಬಿಡ ವೃತ್ತದಲ್ಲಿ ಯುವಕನೊಬ್ಬ ಸಿಗ್ನಲ್​ನಲ್ಲಿ ಬೈಕ್ ನಿಲ್ಲಿಸಿದ್ದ. ಕಿವಿಗಡಚಿಕ್ಕುವ ಹಾಗೆ ಹಾರ್ನ್ ಹಾಕುತ್ತ ಆಚೀಚೆ ಸಾಗುತ್ತಿದ್ದ ವಾಹನಗಳ ಸದ್ದಿನ ಮಧ್ಯೆ ಸಿಗ್ನಲ್ ಕ್ಲಿಯರ್ ಆಗುವ ಮೊದಲೇ ಆತ ಬೈಕ್ ಸ್ಟಾರ್ಟ್ ಮಾಡಿ ಬುರ್… ಎಂದು ಹೊರಟ. ಕೊಂಚ ಮುಂದೆ ಹೋಗುವಷ್ಟರಲ್ಲಿ ಚಲಿಸುತ್ತಿದ್ದ ಟಿಪ್ಪರ್ ವಾಹನಕ್ಕೆ ಗುದ್ದಿದ್ದ. ಕೆಳಗೆ ಬಿದ್ದ ಆ ಯುವಕನ ಅಂಗಾಂಗಗಳಿಗೆ ಸಣ್ಣ ತರಚಿದ ಗಾಯಗಳಾಗಿದ್ದನ್ನು ಹೊರತುಪಡಿಸಿ ಮತ್ತೇನೂ ಆಗಿರಲಿಲ್ಲ. ಆದರೆ ತಲೆಗೆ ಗಾಯವಾಗಿ ತೀವ್ರ ರಕ್ತಸ್ರಾವದಿಂದ ಯುವಕ ಸತ್ತುಹೋದ. ಆಗ ಸ್ಥಳಕ್ಕೆ ಆಗಮಿಸಿದ ಪೊಲೀಸರಿಂದ ಹಿಡಿದು ಅಲ್ಲಿ ನೆರೆದಿದ್ದ ಎಲ್ಲರ ಬಾಯಲ್ಲಿ ಬಂದದ್ದು ಒಂದೇ ಮಾತು, ‘ಪುಣ್ಯಾತ್ಮ, ಹೆಲ್ಮೆಟ್ ಹಾಕ್ಕೊಂಡು ಗಾಡಿ ಓಡಿಸಿದ್ರೆ ಉಳೀತಿದ್ನೋ ಏನೋ’.

ರಸ್ತೆ ನಿಯಮಗಳ ಪಾಲನೆ ಮಾಡುವ ಕುರಿತು ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ, ಎನ್​ಜಿಒಗಳು, ಫೌಂಡೇಷನ್​ಗಳು ನಿರಂತರವಾಗಿ ಜಾಗೃತಿ ಮೂಡಿಸುತ್ತಲೇ ಬರುತ್ತಿವೆ. ಹೆಚ್ಚುತ್ತಿರುವ ಜನಸಂಖ್ಯೆ, ವಾಹನ ದಟ್ಟಣೆಯಿಂದ ಸಂಚಾರ ಸಮಸ್ಯೆಗಳು ದಿನೇದಿನೆ ಹೆಚ್ಚುತ್ತಲೇ ಇವೆ. ಅದರ ಜತೆಯಲ್ಲಿ ಅಪಘಾತ ಪ್ರಮಾಣವೂ ತೀವ್ರಗತಿಯಲ್ಲಿ ಏರುತ್ತಿದೆ. ಆಕಸ್ಮಿಕ ಅಪಘಾತ ಸಂಭವಿಸಬಹುದಾದರೂ ಹೆಚ್ಚಿನ ರಸ್ತೆ ಅಪಘಾತಗಳು ರಸ್ತೆ ಸಂಚಾರ ನಿಯಮ ಉಲ್ಲಂಘನೆಯಿಂದಲೇ ಆಗುತ್ತಿವೆ ಎನ್ನುವುದು ಕೂಡ ಕಟುಸತ್ಯ. ಮನೆಯಿಂದ ಹೊರ ಹೋದವರು ಮತ್ತೆ ಮನೆಗೆ ಜೀವಂತವಾಗಿ ಮರಳುತ್ತಾರೋ ಇಲ್ಲವೋ ಎಂಬ ಸಂಶಯ ಬರುವ ಮಟ್ಟಿಗೆ ಅಪಘಾತಗಳು ಸರ್ವೆ ಸಾಮಾನ್ಯ ಎನ್ನುವಂತೆ ಘಟಿಸುತ್ತಿವೆ.

ರಸ್ತೆ ನಿಯಮಗಳ ಬಗ್ಗೆ ಅಜ್ಞಾನ

ಬಹಳಷ್ಟು ಜನರಿಗೆ ರಸ್ತೆ ಸಂಚಾರ ನಿಯಮಗಳ ಅರಿವು ಇರುವುದಿಲ್ಲ. ಗಾಡಿ ಓಡಿಸುವುದೆಂದರೆ ಓಡಿಸುವುದು ಎಂಬಂತೆ ಅವರು ವಾಹನ ಚಲಾಯಿಸುತ್ತಾರೆ. ಪೊಲೀಸ್ ಹಾಗೂ ಸಾರಿಗೆ ಇಲಾಖೆ ಗೊತ್ತುಪಡಿಸಿರುವ ನಿಯಮಗಳನ್ನು ಅರ್ಥೈಸಿಕೊಳ್ಳುವ ಗೋಜಿಗೆ ಹೋಗದೆ ಸುಖಾಸುಮ್ಮನೆ ತಮಗೆ ತೋಚಿದಂತೆ ಗಾಡಿ ಓಡಿಸುವವರ ಸಂಖ್ಯೆ ಹೆಚ್ಚಿದೆ. ತಮಗೆ ಗೊತ್ತಿಲ್ಲದಿದ್ದರೆ ಯಾರನ್ನಾದರೂ ಕೇಳಿ ತಿಳಿದುಕೊಳ್ಳುವ, ಓದಿ ಮನನ ಮಾಡಿಕೊಳ್ಳುವ ಗೋಜಿಗೂ ಅವರು ಹೋಗುವುದಿಲ್ಲ. ಹಾಗಾದಾಗ ಅಪಘಾತಗಳು ಹೆಚ್ಚಾಗುತ್ತವೆ. ‘ಸಣ್ಣ ತಿರುವಿನಲ್ಲಿ ಓವರ್​ಟೇಕ್ ಮಾಡಬಾರದು’ ಎಂಬುದು ಎಚ್ಚರಿಕೆಯ ನಿಯಮವೇ ಆದರೂ ಅದನ್ನು ಮುರಿದು ಗಾಡಿ ಓಡಿಸಿದರೆ ಅಪಘಾತವಾಗದೆ ಇನ್ನೇನಾದೀತು? ಆ ನಿಟ್ಟಿನಲ್ಲಿ ರಸ್ತೆ ನಿಯಮಗಳನ್ನು ಅರ್ಥ ಮಾಡಿಕೊಂಡು ಪಾಲಿಸುವ ಸಂಕಲ್ಪ ಎಲ್ಲರಿಂದಲೂ ಆಗಬೇಕು.

ನಿಯಮ ಉಲ್ಲಂಘನೆ

ಅನಕ್ಷರಸ್ಥರಾದವರು ಓದಲು, ಬರೆಯಲು ಬಾರದ ಕಾರಣ ರಸ್ತೆ ಸಂಚಾರ ನಿಯಮ ಅರ್ಥ ಆಗಿಲ್ಲ ಅಥವಾ ತಿಳಿದಿಲ್ಲ ಎನ್ನಬಹುದು. ಆದರೆ ಅಕ್ಷರಸ್ಥರಾದವರೇ ನಿಯಮಗಳನ್ನು ಪಾಲಿಸದಿದ್ದರೆ ಅದು ಸ್ಪಷ್ಟ ಉಲ್ಲಂಘನೆ. ನಿಯಮ ಉಲ್ಲಂಘನೆಗೆ ಕಾರಣ ಕೊಟ್ಟು ಸಮರ್ಥಿಸಿಕೊಳ್ಳುವುದು ಮೂರ್ಖತನ. ಆದರೆ ವಿಪರ್ಯಾಸ ಎಂದರೆ ಬಹುತೇಕ ಅಕ್ಷರಸ್ಥರೇ ಸಂಚಾರ ನಿಯಮಗಳನ್ನು ಮುರಿಯುತ್ತಾರೆ. ಎಲ್ಲ ತಿಳಿದೂ ತಪ್ಪು ಮಾಡುವ, ಆ ಮೂಲಕ ಜೀವನಕ್ಕೆ, ಜೀವಕ್ಕೆ ಹಾನಿ ಮಾಡಿಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕುವುದು ಯಾವ ಒಳಿತನ್ನೂ ತರುವುದಿಲ್ಲ. ಅವಸರದಲ್ಲಿ ವಾಹನ ಚಾಲನೆ ಮಾಡಲು ಹೋಗಿ ಇನ್ನಾರದೋ ಜೀವ ತೆಗೆಯುವ ಹಕ್ಕು ಯಾರಿಗೂ ಇಲ್ಲ. ಹಾಗಾಗಿ ರಸ್ತೆ ಸಂಚಾರ ನಿಯಮಗಳನ್ನು ಉಲ್ಲಂಘಿಸದೆ, ಇನ್ನೊಬ್ಬರಿಗೆ ಮಾದರಿ ಆಗುವ ಹಾಗೆ ವಾಹನ ಚಲಾಯಿಸಬೇಕು.

ಡ್ರಂಕ್ ಆಂಡ್ ಡ್ರೖೆವ್

ದೇಶದ ಶೇಕಡಾವಾರು ಅಪಘಾತ ಪ್ರಕರಣಗಳಲ್ಲಿ ಹೆಚ್ಚಿನ ಅಪಘಾತಗಳು ಮದ್ಯಪಾನ ಮಾಡಿ ವಾಹನ ಓಡಿಸುವುದರಿಂದ ಘಟಿಸುತ್ತಿವೆ. ಎಲ್ಲಾದರೂ ಅಪಘಾತವಾಗಿ ಯಾರೋ ಜೀವ ಕಳೆದುಕೊಂಡರೆ, ‘ಡ್ರೖೆವರ್ ಕುಡಿದಿದ್ನಾ?’ ಎಂಬ ಪ್ರಶ್ನೆ ತಕ್ಷಣ ತೂರಿ ಬರುತ್ತದೆ. ಅಷ್ಟರಮಟ್ಟಿಗೆ ಮದ್ಯಸೇವನೆ ಮಾಡಿ ವಾಹನ ಓಡಿಸುವ ಗೀಳು ಸುದ್ದಿ ಮಾಡುತ್ತಿದೆ. ಕುಡಿದು ವಾಹನ ಚಾಲನೆ ಮಾಡುವ ವ್ಯಕ್ತಿಯ ಮಿದುಳು ತೀವ್ರವಾಗಿ ಅಥವಾ ನಿಧಾನವಾಗಿ ಕ್ರಿಯೆ ಪ್ರತಿಕ್ರಿಯೆಗೆ ಸ್ಪಂದಿಸುವುದರಿಂದ ಕ್ಷಣ ಮಾತ್ರದಲ್ಲಿ ಅಪಘಾತ ಸಂಭವಿಸಬಹುದು ಎಂದು ತಜ್ಞರು ಹೇಳುತ್ತಾರೆ. ಕುಡಿದು ವಾಹನ ಚಲಾಯಿಸುವವರು ತಮ್ಮ ಜೀವಕ್ಕೆ ಮಾತ್ರ ಹಾನಿ ಮಾಡಿಕೊಳ್ಳುವುದಿಲ್ಲ. ಬದಲಿಗೆ ಹಲವು ಜನರ ಜೀವಕ್ಕೆ ಸಂಚಕಾರ ತರುತ್ತಾರೆ. ಆದ್ದರಿಂದ ಕುಡಿದು ವಾಹನ ಚಾಲನೆ ಮಾಡುವುದನ್ನು ಸಂಪೂರ್ಣ ನಿಷೇಧಿಸಬೇಕಾಗಿದೆ. ಆ ನಿಟ್ಟಿನಲ್ಲಿ ಸರ್ಕಾರಗಳು ಕೂಡ ಈಗೀಗ ದಿಟ್ಟ ಹೆಜ್ಜೆ ಇಟ್ಟಿರುವುದು ತುಸು ಸಮಾಧಾನಕರ ವಿಷಯ. ಅದಲ್ಲದೆ ಮಾದಕ ದೃವ್ಯ ಸೇವಿಸಿ ಗಾಡಿ ಓಡಿಸುವವರೂ ಕೂಡ ಅಪಘಾತ ಮಾಡುವಲ್ಲಿ ಹಿಂದೆ ಬಿದ್ದಿಲ್ಲ ಎನ್ನುವುದು ಕೂಡ ಚಿಂತಿಸಬೇಕಾದ ವಿಷಯವೇ.

ಥ್ರಿಲ್ಲಿಂಗ್ ಸ್ಪೀಡ್

ಅಪಘಾತಗಳ ಸಂಖ್ಯೆ ಹೆಚ್ಚಲು ಇನ್ನೊಂದು ಮುಖ್ಯ ಕಾರಣ ಅತಿಯಾದ ವೇಗ. ಅತಿ ವೇಗವಾಗಿ ವಾಹನ ಚಾಲನೆ ಮಾಡುವುದರಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತವೆ. ಮುಖ್ಯವಾಗಿ ಯುವ ಜನಾಂಗ ಅತಿ ವೇಗವನ್ನು ಎಂಜಾಯ್ ಮಾಡುವುದರಿಂದ ಹಾಗೂ ವೇಗವಾಗಿ ಗಾಡಿ ಓಡಿಸುವುದನ್ನೇ ನಿಜವಾದ ಥ್ರಿಲ್ ಎಂದು ಭಾವಿಸುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ನಮ್ಮ ಜೀವದಷ್ಟೇ ನಮ್ಮ ಹಿಂದೆ, ಮುಂದೆ, ಅಕ್ಕ ಪಕ್ಕ ಗಾಡಿ ಓಡಿಸುವವರ ಜೀವವೂ ಮುಖ್ಯ ಎಂದು ನಿಜಕ್ಕೂ ಭಾವಿಸುವವರು ಅತಿ ವೇಗದ ಚಾಲನೆಗೆ ಕೈ ಹಾಕುವುದಿಲ್ಲ. ಆದರೆ ಯೌವನದ ಜೋಶ್​ನಲ್ಲಿ, ಕಣ್ಣಿಗೆ ಕಂಡಿದ್ದೆಲ್ಲವನ್ನೂ ‘ಒಂದು ಕೈ ನೋಡೇ ಬಿಡೋಣ’ ಎಂಬಂಥ ಕ್ಷಣಿಕ ಥ್ರಿಲ್​ನ ಹಂಬಲಕ್ಕೆ ಬಿದ್ದ ಯುವ ಮನಸ್ಸುಗಳು ‘ಸ್ಪೀಡ್ ಥ್ರಿಲ್ಸ್ ಬಟ್ ಕಿಲ್ಸ್’ ಎಂಬ ಎಚ್ಚರಿಕೆ ಘಂಟೆಯ ಸದ್ದು ಮೀರಿಯೂ ಜೀವಹಾನಿಯಾಗುವಂಥ ಹೆಜ್ಜೆ ಇಟ್ಟುಬಿಡುತ್ತಾರೆ.

ರಸ್ತೆ ದಾಟುವಾಗ ಎಚ್ಚರ!

ಹೈವೇಗಳಲ್ಲಿ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟಲು ಸರ್ವೀಸ್ ರೋಡ್ ಹಾಗೂ ಅಂಡರ್​ಪಾಸ್​ಗಳನ್ನು ನಿರ್ವಿುಸಲಾಗಿರುತ್ತದೆ. ಆದರೆ ಜನರು ಅವಸರ ಹಾಗೂ ಶಾರ್ಟ್ ಕಟ್ ಆಗುತ್ತದೆ ಎಂದುಕೊಂಡು ಹೈವೇ ದಾಟುತ್ತಾರೆ. ಹೈವೇಗಳಲ್ಲಿ ಹೆಚ್ಚಿನ ವಾಹನಗಳು ಅತಿ ವೇಗದಿಂದ ಸಂಚರಿಸುವುದರಿಂದ ವೃದ್ಧರು, ಮಹಿಳೆಯರು, ಮಕ್ಕಳು ವೇಗವಾಗಿ ರಸ್ತೆ ದಾಟಲು ಕಷ್ಟವಾಗುವುದರಿಂದ ಅಪಘಾತ ಸಂಭವಿಸುತ್ತವೆ. ಹಾಗಾಗಿ ಈ ರೀತಿ ಅನಧಿಕೃತ ರೋಡ್ ಕ್ರಾಸಿಂಗ್ ಮನೋಭಾವ ನಿಲ್ಲಬೇಕು.

ಒತ್ತಡ ಹಾಗೂ ಅವಸರ

ಹೇಗಾದರೂ ಮಾಡಿ ಜೀವನದಲ್ಲಿ ಮುಂದೆ ಬರಬೇಕು ಎಂಬ ನಿಲುವಿನೊಂದಿಗೆ ಜಿದ್ದಿಗೆ ಬಿದ್ದಂತೆ ಓಡುತ್ತಿರುವ ಜಮಾನಾದಲ್ಲಿ ಮನುಷ್ಯರನ್ನು ಒತ್ತಡ ಆಳುತ್ತಿದೆ. ಅತಿ ಚಿಕ್ಕ ವಯಸ್ಸಿನಲ್ಲೇ ಮಧುಮೇಹ, ಅಧಿಕ ರಕ್ತದೊತ್ತಡದಂಥ ಕಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ಬದಲಾಗುತ್ತಿರುವ ಸಾಮಾಜಿಕ, ಆರ್ಥಿಕ, ವೃತ್ತಿ, ವೈಯಕ್ತಿಕ ಧಾವಂತಗಳು ಮನುಷ್ಯರನ್ನು ಒತ್ತಡಕ್ಕೆ ಸಿಲುಕಿಸುತ್ತಿವೆ. ಅದರ ಪರಿಣಾಮ ಮನುಷ್ಯ ಅವಸರಕ್ಕೆ ಬೀಳುತ್ತಿದ್ದಾನೆ. ಅಂಥ ಅವಸರ ಹಲವು ಅವಘಡಗಳಿಗೆ ಆತನನ್ನು ಈಡುಮಾಡುತ್ತಿದೆ. ಒತ್ತಡಕ್ಕೆ ಸಿಲುಕಿದವರು ಏಕಾಗ್ರತೆ ಸಾಧಿಸುವುದು ಕಷ್ಟ ಮಾತು. ಹಾಗಾದಾಗ ವಾಹನ ಚಾಲನೆ ಮಾಡುವಾಗ ವೃಥಾ ಅವಸರ ಮಾಡಲು ಹೋಗಿ ಅಪಘಾತ ಸಂಭವಿಸುತ್ತವೆ. ಅಧಿಕ ರಕ್ತದೊತ್ತಡ ಇರುವ ಮನುಷ್ಯ ಟ್ರಾಫಿಕ್ ಜಾಮ್ಲ್ಲಿ ಸಿಲುಕಿಕೊಂಡರೆ, ನಿಗದಿತ ಅವಧಿ ಮೀರಿ ಟ್ರಾಫಿಕ್ ಮುಕ್ತವಾಗದೆ ಉಳಿದರೆ ಆತನ ಚೀರಾಟ, ಧಾವಂತ, ಉದ್ವೇಗದ ಸ್ಥಿತಿಯನ್ನು ಕಲ್ಪಿಸಿಕೊಂಡರೆ ನಿಮಗೆ ಪರಿಸ್ಥಿತಿ ಅರ್ಥವಾಗುತ್ತದೆ.

ಸರಿಯಾಗಿ ವಾಹನ ಚಲಾಯಿಸುವುದು ಕೂಡ ಸಾಮಾಜಿಕ ಜವಾಬ್ದಾರಿಯೇ. ಅದನ್ನು ಅರ್ಥ ಮಾಡಿಕೊಂಡು ವಾಹನ ಚಲಾಯಿಸಬೇಕು. ಯಾವುದೋ ಗುಂಗಿನಲ್ಲಿ, ಹುರುಪಿನಲ್ಲಿ ಗಾಡಿ ಓಡಿಸಿ ತಮಗೂ ಇನ್ನೊಬ್ಬರ ಜೀವಕ್ಕೂ ಹಾನಿ ತಂದುಕೊಳ್ಳಬಾರದು. ಆ ನಿಟ್ಟಿನಲ್ಲಿ ಯುವ ಸಮುದಾಯ ಸೇರಿದಂತೆ ಎಲ್ಲರೂ ತಮ್ಮ ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ.

ಎಲ್ಲರೂ ತಮ್ಮ ತಮ್ಮ ಜವಾಬ್ದಾರಿ ಅರಿತು ರಸ್ತೆ ನಿಯಮ ಪಾಲಿಸಬೇಕು. ಇದು ದೇಶಕ್ಕೂ, ಜೀವಕ್ಕೂ ಹಿತಕಾರಿ. ಇನ್ನೊಂದು ಮುಖ್ಯ ವಿಷಯವೆಂದರೆ ನಾವು ಮಾತ್ರ ಸರಿಯಾಗಿ ಡ್ರೖೆವಿಂಗ್ ಮಾಡಿದರೆ ಸಾಲದು. ನಮ್ಮ ಅಕ್ಕಪಕ್ಕ, ಹಿಂದೆ, ಮುಂದೆ ಇರುವವರು ಕೂಡ ಸರಿಯಾಗಿ ವಾಹನ ಚಾಲನೆ ಮಾಡಬೇಕು. ಹಾಗಾದಾಗ ಮಾತ್ರ ಅಪಘಾತಗಳ ಸಂಖ್ಯೆ ಕ್ಷೀಣಿಸಲು ಸಾಧ್ಯ.

ವಾಹನ ಚಾಲನೆ ಮಾಡುವಾಗ ಗಮನಿಸಿ

# ಕಾರಿನಲ್ಲಿ ಪ್ರಯಾಣಿಸುವವರು ಕಡ್ಡಾಯವಾಗಿ ಸೀಟ್ ಬೆಲ್ಟ್ ಕಟ್ಟಿಕೊಳ್ಳಬೇಕು. ಇದರಿಂದ ಅಪಘಾತ ಸಂಭವಿಸಿದಾಗ ಮುಖ ಗ್ಲಾಸ್​ಗೆ ಗುದ್ದುವುದು ತಪ್ಪುತ್ತದೆ.

# ಮದ್ಯಪಾನ ಮಾಡಿ ವಾಹನ ಓಡಿಸುವ ಚಾಳಿ ಒಳ್ಳೆಯದಲ್ಲ. ಅದಕ್ಕೆ ಸಂಬಂಧಪಟ್ಟಂತೆ ಕುಟುಂಬಸ್ಥರು ಕೂಡ ವಾಹನ ಚಾಲಕರ ಮೇಲೆ ನಿಗಾ ಇಡಬೇಕು.

# ಸಿಗ್ನಲ್ ಜಂಪ್ ಮಾಡುವುದು, ನುಗ್ಗುವುದು, ಫುಟ್​ಪಾತ್ ಮೇಲೆ ವಾಹನ ಓಡಿಸುವುದನ್ನು ನಿಲ್ಲಿಸಬೇಕು.

# ಮೊಬೈಲ್​ನಲ್ಲಿ ಮಾತನಾಡುತ್ತ, ಕಿವಿಯಲ್ಲಿ ಇಯರ್​ಫೋನ್ ಸಿಕ್ಕಿಸಿಕೊಂಡು ಹಾಡು ಕೇಳುತ್ತ ಗಾಡಿ ಓಡಿಸುವುದನ್ನು ಬಿಟ್ಟು ಬಿಡಬೇಕು. ಒಂದು ವೇಳೆ ಮಾತನಾಡಲೇ ಬೇಕಿದ್ದರೆ ಗಾಡಿಯನ್ನು ಸೈಡ್​ಗೆ ಹಾಕಿ ಮಾತು ಮುಗಿಸಿ ಪುನಃ ವಾಹನ ಚಾಲನೆ ಮುಂದುವರಿಸಬೇಕು.

# ವಾಹನಗಳನ್ನು ಎಡಬದಿಯಿಂದ ಓವರ್​ಟೇಕ್ ಮಾಡುವುದು ಕಾನೂನು ಪ್ರಕಾರ ತಪ್ಪೇ ಆದ್ದರಿಂದ ಈ ಪ್ರಯತ್ನ ಮಾಡುವುದನ್ನು ನಿಲ್ಲಿಸಬೇಕು.

# ಬೃಹತ್ ಹಾಗೂ ಹೆಚ್ಚು ಚಕ್ರ ಹೊಂದಿದ ಲಂಬವಾದ ವಾಹನಗಳ ಹಿಂದೆ ಸಂಚರಿಸುವಾಗ, ಓವರ್​ಟೇಕ್ ಮಾಡುವುದಾದರೆ ಹುಷಾರಾಗಿರಬೇಕು.

# ರಾತ್ರಿ ವೇಳೆ ಬೈಕ್ ಓಡಿಸುವವರು ಹೆಲ್ಮೆಟ್, ಹ್ಯಾಂಡ್ ಗ್ಲೌಸ್, ಮಾಸ್ಕ್ ಧರಿಸಬೇಕು. ಇದರಿಂದ ಆರಾಮಾಗಿ ಗಾಡಿ ಓಡಿಸಲು ಹಾಗೂ ಮಳೆ, ಚಳಿಯಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ.

ತಲೆ ಹುಷಾರು

# ಹೆಲ್ಮೆಟ್ ಧರಿಸದೆ ವಾಹನ ಓಡಿಸುವುದರಿಂದ ಅಪಘಾತ ಸಂಭವಿಸಿದರೆ ತಲೆಗೆ ಪೆಟ್ಟಾಗಿ ರಕ್ತಸ್ರಾವದಿಂದ ಜೀವ ಹೋಗಬಹುದು. ಆದ್ದರಿಂದ ಹೆಲ್ಮೆಟ್ ಧರಿಸಬೇಕು.

# ವಾಹನಗಳಲ್ಲಿ ಜೋರಾಗಿ ಹಾಡು ಹಾಕಿಕೊಂಡು ಸಂಚರಿಸುವುದು ತಪ್ಪು. ಹಿಂಬದಿ ವಾಹನಗಳು ಹಾರ್ನ್ ಹಾಕಿದ್ದು ಹಾಗೂ ಗಾಡಿಯಲ್ಲಿ ಕಂಡುಬರುವ ದೋಷಗಳು (ಟೈರ್ ಪಂಕ್ಚರ್, ಟೈರ್ ಬರ್ಸ್ಟ್, ಪಾಟಾ ಕಟ್) ಗಮನಕ್ಕೆ ಬಾರದೆ ಹೋಗಬಹುದು.

# ಗಾಡಿ ಕಂಡಿಷನ್​ನಲ್ಲಿದೆಯೇ ಎಂಬುದನ್ನು ಮತ್ತೊಮ್ಮೆ ಪರೀಕ್ಷಿಸಿಯೇ ಹತ್ತಬೇಕು. ದೂರ ಪ್ರಯಾಣ ಮಾಡುವವರು ವಾಹನದಲ್ಲಿ ಇಂಧನ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಬದಲಿ ಟೈರ್ ಸುಸ್ಥಿತಿಯಲ್ಲಿದೆಯೇ ಎಂಬುದನ್ನು ಗಮನಿಸಬೇಕು.

# ವಾಹನ ಚಲಾಯಿಸುವಾಗ ಸೆಲ್ಪಿ ತೆಗೆದುಕೊಳ್ಳುವುದು ನಿಜಕ್ಕೂ ಮೂರ್ಖತನ. ಆ ಕ್ಷಣದ ಖುಷಿಗಾಗಿ ಜೀವವನ್ನೇ ಬಲಿಕೊಡುವುದು ಬುದ್ಧಿವಂತಿಕೆ ಅಲ್ಲವೇ ಅಲ್ಲ.

Leave a Reply

Your email address will not be published. Required fields are marked *

Back To Top