ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳರ ಉಚ್ಚಾಟನೆ ಖಂಡಿಸಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದಿಂದ ಬೃಹತ್ ಪ್ರತಿಭಟನೆ ನಡೆಯಿತು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಸಮಾಜದ ಜನ ಶಾಸಕ ಯತ್ನಾಳ ಪರ ಘೋಷಣೆ ಕೂಗಿದರಲ್ಲದೇ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಆಕ್ರೋಶ ಹೊರಹಾಕಿದರು.
ಕೇಸರಿ ಧ್ವಜ ಹಿಡಿದು ರಾರಾಜಿಸಿದ ಪಂಚಮಸಾಲಿ ಸಮಾಜದವರು ಬಿಜೆಪಿ ಹೈಕಮಾಂಡ್ ವಿರುದ್ಧ ಘೋಷಣೆ ಮೊಳಗಿಸಿದರು. ಜೈ ಪಂಚಮಸಾಲಿ ಎಂದು ಜಯ ಘೋಷ ಹಾಕಿದರು. ಮಾನವ ಸರಪಳಿ ನಿರ್ಮಿಸಿ ಯತ್ನಾಳ ಪರ ಒಗ್ಗಟ್ಟು ಪ್ರದರ್ಶಿಸಿದರು. ರಸ್ತೆ ತಡೆ ನಡೆಸಿದರು. ಇದರಿಂದ ಕೆಲ ಕಾಲ ಸಂಚಾರಕ್ಕೆ ವ್ಯತ್ಯಯವಾಯಿತು.
ಕೂಡಲೇ ಉಚ್ಚಾಟನೆ ನೀತಿ ಕೈ ಬಿಡದೇ ಹೋದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಮತ್ತು ಮುಂಬರುವ ದಿನಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಸನಗೌಡ ಪಾಟೀಲ ಯತ್ನಾಳರ ನೇರ-ನಿಷ್ಠುರ ನಾಯಕ. ಅವರು ಸತ್ಯವನ್ನೇ ನುಡಿದಿದ್ದಾರೆ. ಇದೀಗ ಅವರನ್ನು ಉಚ್ಚಾಟನೆ ಮಾಡಿರುವುದು ಕೇವಲ ಪಂಚಮಸಾಲಿ ಸಮುದಾಯಕ್ಕಷ್ಟೇ ಅಲ್ಲ; ಇಡೀ ಹಿಂದು ಧರ್ಮಕ್ಕೆ ನೋವಾಗಿದೆ ಎಂದರು.
ಮುಖಂಡರಾದ ಎಂ.ಎಸ್. ರುದ್ರಗೌಡರ, ಬಸನಗೌಡ ಪಾಟೀಲ ನಾಗರಾಳಹುಲಿ, ಸದಾಶಿವ ಗುಡ್ಡೋಡಗಿ, ನಿಂಗನಗೌಡ ಸೋಲಾಪುರ, ರವಿಗೌಡ ಪಾಟೀಲ, ಲಕ್ಷ್ಮಿ ಕನ್ನೊಳ್ಳಿ, ವಿವೇಕ ಸಜ್ಜನ ಮತ್ತಿತರರಿದ್ದರು.