More

    ಸರ್ಕಾರದ ವೆಚ್ಚದಲ್ಲೇ ಸಾಮೂಹಿಕ ವಿವಾಹ

    ಬೆಂಗಳೂರು: ರಾಜ್ಯದ ಎಲ್ಲ ಜಿಲ್ಲೆಗಳ ಆಯ್ದ ಎ ಗ್ರೇಡ್ ಮುಜರಾಯಿ ದೇವಸ್ಥಾನಗಳಲ್ಲಿ ಪ್ರತಿ ವರ್ಷ ಸಾಮೂಹಿಕ ವಿವಾಹ ಆಯೋಜಿಸಲಿದ್ದು, ಪ್ರತಿ ಜೋಡಿಗೆ ತಗಲುವ 55,000 ರೂ. ವೆಚ್ಚವನ್ನು ದೇವಸ್ಥಾನದ ನಿಧಿಯಿಂದ ತುಂಬಿಕೊಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದರು.

    ವಿಧಾನಸೌಧದಲ್ಲಿ ಶುಕ್ರವಾರ ಧಾರ್ವಿುಕ ಮತ್ತು ದತ್ತಿ ಇಲಾಖೆ ರೂಪಿಸಿದ ‘ಸಪ್ತಪದಿ’ ಲಾಂಛನ ಮತ್ತು ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು. ವಿವಾಹ ಕಾರಣಕ್ಕೆ ಆಸ್ತಿ-ಪಾಸ್ತಿ ಮಾರಿಕೊಂಡು ನಂತರ ಪಶ್ಚಾತ್ತಾಪಪಡುವುದು. ಸಾಲ-ಸೋಲ ಮಾಡಿಕೊಂಡು ಕುಟುಂಬದ ನೆಮ್ಮದಿಗೆ ಭಂಗ ತಂದುಕೊಳ್ಳುವುದು, ಮದುವೆಯಾದ ಜೋಡಿಯೂ ಮನೆಗೆ ಭಾರವಾದೆವಲ್ಲ ಎಂದು ಕೊರಗುವುದು ಮನಗಂಡು ಈ ಕಾರ್ಯಕ್ರಮ ಜಾರಿಗೆ ತರಲಾಗಿದೆ. ಎಲ್ಲ ವರ್ಗಗಳ ಸಾಮಾನ್ಯ ಹಾಗೂ ಮಧ್ಯಮ ಕುಟುಂಬಗಳು ಇದರ ಲಾಭ ಪಡೆಯಲು ಸಂಕೋಚ ಪಟ್ಟುಕೊಳ್ಳಬಾರದು ಎಂದರು.

    ವರನಿಗೆ ಹೂವಿನ ಹಾರ, ಪಂಚೆ, ಶರ್ಟ್ ಮತ್ತು ಶಲ್ಯಕ್ಕಾಗಿ 5,000 ರೂ., ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆ ಕಣಕ್ಕಾಗಿ 10,000 ರೂ. ಪ್ರೋತ್ಸಾಹಧನ ಹಾಗೂ ಚಿನ್ನದ ತಾಳಿ- ಎರಡು ಚಿನ್ನದ ಗುಂಡು (ಅಂದಾಜು 8 ಗ್ರಾಂ) 40,000 ರೂ. ಸೇರಿ ಒಟ್ಟು 55,000 ರೂ. ಅನ್ನು ದೇವಸ್ಥಾನ ನಿಧಿಯಿಂದ ಭರಿಸಲಾಗುವುದು. ವಿವಾಹಕ್ಕೆ ಬರುವ ವಧು-ವರರ ಬಂಧುಗಳು, ಸಾರ್ವಜನಿಕರಿಗೆ ಊಟೋಪಚಾರ, ಅವಶ್ಯ ವೆಚ್ಚಗಳನ್ನು ಇದೇ ನಿಧಿಯಿಂದ ತುಂಬಿ ಕೊಡಲಾ ಗುತ್ತದೆ ಎಂದು ವಿವರಿಸಿದರು.

    ಈ ಹಿಂದೆ ಧರ್ಮಸ್ಥಳ ಇನ್ನಿತರ ಖಾಸಗಿ ಸಂಘ-ಸಂಸ್ಥೆಗಳು ಸಂಘಟಿಸುವ ಸಾಮೂಹಿಕ ವಿವಾಹಗಳಿಗೆ ಸರ್ಕಾರ ನೆರವು ನೀಡುತ್ತಿತ್ತು. ಈಗ ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎಂಬಂತೆ ಮುಜರಾಯಿ ದೇವಸ್ಥಾನಗಳಲ್ಲಿ ಜಮೆಯಾದ ನಿಧಿಯಿಂದಲೇ ಈ ಕಾರ್ಯಕ್ರಮದ ಖರ್ಚು-ವೆಚ್ಚ ಭರಿಸಲಾಗುತ್ತದೆ ಎಂದು ಹೇಳಿದರು. ಸಾರ್ವಜನಿಕರು ಟೋಲ್ ಫ್ರೀ 1800 4256654 ಸಂಖ್ಯೆಗೆ ಕರೆ ಮಾಡಿ ಕಾರ್ಯಕ್ರಮದ ಮಾಹಿತಿ ಪಡೆಯಬಹುದು.

    ಏ.26ರಂದು ಮೊದಲ ಹಂತ, ಮೇ 24ಕ್ಕೆ 2ನೇ ಹಂತದಲ್ಲಿ ‘ಸಪ್ತಪದಿ’ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇಲಾಖೆ ವ್ಯಾಪ್ತಿಯಲ್ಲಿ 100 ಎ ಗ್ರೇಡ್ ದೇವಾಲಯಗಳಿದ್ದು, ಕಲ್ಯಾಣ ಮಂಟಪ ಸಹಿತ ಅಗತ್ಯ ಸವಲತ್ತಿರುವ ದೇವಸ್ಥಾನಗಳಲ್ಲಿ ವಿವಾಹ ನಡೆಸಲಾಗುತ್ತದೆ.

    | ಕೋಟ ಶ್ರೀನಿವಾಸ ಪೂಜಾರಿ ಧಾರ್ವಿುಕ-ದತ್ತಿ ಸಚಿವ

    ಬಾಲ್ಯವಿವಾಹ ನಿಯಂತ್ರಿಸಿ

    ಮುಜರಾಯಿ ದೇವಸ್ಥಾನಗಳಲ್ಲಿ ನಡೆಯುವ ಸಾಮೂಹಿಕ ವಿವಾಹಗಳ ಕಾರ್ಯಕ್ರಮಗಳಲ್ಲಿ ಬಾಲ್ಯವಿವಾಹ ನಿಯಂತ್ರಣಕ್ಕೆ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಆಯಾ ಜಿಲ್ಲಾಧಿಕಾರಿ ಮೇಲುಸ್ತುವಾರಿಯಲ್ಲಿ ಕಾರ್ಯಕ್ರಮ ಅನುಷ್ಠಾನಗೊಳ್ಳುತ್ತಿದೆ. ಇಚ್ಛೆಯುಳ್ಳವರು 1 ತಿಂಗಳು ಮುಂಚಿತವಾಗಿ ಆಯಾ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಅರ್ಜಿ ಪಡೆದು, ಅಗತ್ಯ ದಾಖಲೆಗಳೊಂದಿಗೆ ನಿಗದಿತ ದಿನಾಂಕದೊಳಗೆ ಸಲ್ಲಿಸಬೇಕಾಗುತ್ತದೆ ಎಂದು ಯಡಿಯೂರಪ್ಪ ತಿಳಿಸಿದರು.

    ತಾಳಿ ಹೊಣೆ ಯಾರಿಗೆ?

    ಬೆಂಗಳೂರು: ಸರ್ಕಾರ ನಡೆಸಲಿರುವ ಉಚಿತ ಸಾಮೂಹಿಕ ವಿವಾಹಕ್ಕೆ ‘ಮಾಂಗಲ್ಯ’ ಒದಗಿಸುವ ಹೊಣೆ ಬಗ್ಗೆ ಗೊಂದಲ ಮೂಡಿದ್ದು, ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನೀಡುವುದೋ? ದೇವಾಲಯಗಳಿಗೆ ವಹಿಸುವುದೋ? ಅಥವಾ ಇಲಾಖೆ ವತಿಯಿಂದಲೇ ಒದಗಿಸುವುದೋ ಎಂಬ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಆಯಾ ಜಿಲ್ಲಾಧಿಕಾರಿಗಳು ಕಾರ್ಯಕ್ರಮದ ಮೇಲುಸ್ತುವಾರಿ ವಹಿಸಬೇಕೆಂಬ ಷರತ್ತು ವಿಧಿಸಿರುವುದರಿಂದ ಮಾಂಗಲ್ಯ ಒದಗಿಸುವ ಹೊಣೆಯನ್ನು ಇವರಿಗೆ ವಹಿಸಲು ನಿರ್ಧರಿಸಲಾಗಿತ್ತು. ತಾಳಿ ವಿನ್ಯಾಸ ಹಾಗೂ ಗುಣಮಟ್ಟ ಸೇರಿ ಖರ್ಚು ವೆಚ್ಚದಲ್ಲಿ ವ್ಯತ್ಯಾಸಗಳು ಉಂಟಾಗಬಹುದು ಎಂಬ ಪ್ರಶ್ನೆ ಉದ್ಭವಿಸಿದೆ. ಇಲಾಖೆಯೇ ವಧುವಿಗೆ ತಾಳಿ ಮತ್ತು ಚಿನ್ನದ ಗುಂಡುಗಳನ್ನು ಒದಗಿಸುವ ಹೊಣೆ ಹೊತ್ತರೂ ಇಲಾಖೆ ಯಿಂದ ಚಿನ್ನ ಖರೀದಿಸಿ ಆಭರಣದಂಗಡಿಗೆ ಕೊಟ್ಟು ಮಾಡಿಸಬೇಕೇ? ಸಿದ್ಧವಾಗಿರುವುದನ್ನೇ ಖರೀದಿಸಿ ನೀಡುವುದೋ ಎಂಬ ಚಿಂತನೆ ನಡೆಸಲಾಗುತ್ತಿದೆ. ಹೀಗಾಗಿ ರಾಜ್ಯದ ಪ್ರಮುಖ ಆಭರಣ ಮಳಿಗೆಗಳಿಗೆ ಇಲಾಖೆ ಪತ್ರ ಬರೆದಿದ್ದು, ಚಿನ್ನ ಕೊಟ್ಟು ಮಾಡಿಸಿದರೆ ಆಗುವ ಖರ್ಚು ಹಾಗೂ ಸಿದ್ಧ ತಾಳಿ-ಗುಂಡು ಖರೀದಿಸಿದರೆ ಆಗುವ ವೆಚ್ಚದ ಮಾಹಿತಿ ಕೋರಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts