More

  ಸಾಮೂಹಿಕ ವಿವಾಹದಿಂದ ಆರ್ಥಿಕ ಹೊರೆಗೆ ಕಡಿವಾಣ

  ಹಾವೇರಿ: ಸಾಮೂಹಿಕ ವಿವಾಹಗಳಲ್ಲಿ ವಿವಾಹವಾಗುವವರು ಬಡವರಲ್ಲ, ಭಾಗ್ಯವಂತರು ಎಂದು ರಂಭಾಪುರಿ ಪೀಠದ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

  ತಾಲೂಕಿನ ನೆಗಳೂರ ಗ್ರಾಮದ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯರ ದ್ವಾದಶ ಪಟ್ಟಾಧಿಕಾರ ಮಹೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

  ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕುವುದರ ಜೊತೆಗೆ ಆರ್ಥಿಕ ಹೊರೆ ಕಡಿಮೆಯಾಗಲಿದೆ. ಮುಂಬರುವ ದಿನಗಳಲ್ಲಿ ಶ್ರೀಮಂತರು ಸಹ ತಮ್ಮ ಮಕ್ಕಳ ವಿವಾಹಗಳನ್ನು ಸಾಮೂಹಿಕ ವಿವಾಹಗಳಲ್ಲಿ ಮಾಡುವಂತಾಗಬೇಕು. ಪ್ರತಿಯೊಬ್ಬ ಮನುಷ್ಯನ ಜೀವನದದಲ್ಲಿ ನಾಲ್ಕು ಆಶ್ರಮಗಳು ತಮ್ಮದೇ ಆದ ಪ್ರಭಾವ ಬೀರಿವೆ. ಅದರಲ್ಲಿ ಗೃಹಸ್ಥಾಶ್ರಮ ಶ್ರೇಷ್ಠವಾಗಿದ್ದು, ಉಳಿದ ಆಶ್ರಮಗಳಿಗೆ ಮೂಲವಾಗಿದೆ. ನೂತನ ವಧು-ವರರು ಜೀವನದಲ್ಲಿ ಬರುವ ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸಿ ಬದುಕು ಸಾಗಿಸಬೇಕು. ವೀರಶೈವ ಧರ್ಮ ಪರಂಪರೆಯ ಪಂಚಪೀಠಗಳು ಹಾಗೂ ಅವುಗಳ ಶಾಖಾಮಠಗಳು ಸರ್ವ ಜನಾಂಗದ ಲೇಸನ್ನು ಬಯಸುವ ಪೀಠಗಳಾಗಿವೆ. ಆ ನಿಟ್ಟಿನಲ್ಲಿ ನೆಗಳೂರನ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠವು ಧರ್ಮ ಸಂಸ್ಕಾರವನ್ನು ಪಸರಿಸುತ್ತಿದೆ. ಗುರುಶಾಂತೇಶ್ವರ ಶಿವಾಚಾರ್ಯರು ಶ್ರೀಮಠದ ಚುಕ್ಕಾಣಿ ಹಿಡಿದು 12 ವರ್ಷಗಳು ತುಂಬಿವೆ. ಈ ಹನ್ನೆರಡು ವರ್ಷಗಳಲ್ಲಿ ಮಠದ ಶ್ರೇಯೋಭಿವೃದ್ಧಿಗಾಗಿ ಶ್ರಮವಹಿಸಿ ಭಕ್ತಭವನ ಲೋಕಾರ್ಪಣೆಗೊಳಿಸಿದ್ದಾರೆ. ಅವರ ಕ್ರಿಯಾತ್ಮಕ ಕಾರ್ಯಗಳಿಗೆ ರಂಭಾಪುರಿ ಜಗದ್ಗುರುಗಳ ಕೃಪಾ ಕಾರುಣ್ಯ ಸದಾ ಕಾಲ ಇರುತ್ತದೆ ಎಂದರು.

  ಶಾಸಕ ನೆಹರು ಓಲೇಕಾರ ಮಾತನಾಡಿ, ನಾನು ನೆಗಳೂರ ಮಠದ ಭಕ್ತನಾಗಿದ್ದು, ಮೂರು ಬಾರಿ ಶಾಸಕನಾಗಲು ಮಠದ ಶ್ರೀಗಳ ಆಶೀರ್ವಾದವೇ ಕಾರಣ. ಮಠದ ಅಭಿವೃದ್ಧಿಗಾಗಿ ಶಾಸಕರ ನಿಧಿಯಿಂದ 5 ಲಕ್ಷ ರೂ. ಅನುದಾನ ನೀಡುವುದಾಗಿ ಘೊಷಿಸಿದರು.

  ಸಮಾರಂಭದಲ್ಲಿ ಅಮ್ಮಿನಭಾವಿ ಪಂಚಗ್ರಹ ಹಿರೇಮಠದ ಅಭಿನವಶಾಂತಲಿಂಗ ಸ್ವಾಮೀಜಿ, ಅಂಗೂರ ಹಿರೇಮಠದ ಶಿವಯೋಗೀಶ್ವರ ಶಿವಾಚಾರ್ಯರು ಉಪದೇಶಾಮೃತ ನೀಡಿದರು. ಕುರುವತ್ತಿ ಹಿರೇಮಠದ ಸಿದ್ಧನಂದೀಶ್ವರ ಶಿವಾಚಾರ್ಯರು, ರಂಭಾಪುರಿ ಪೀಠದ ಆಡಳಿತಾಧಿಕಾರಿ ಎಸ್.ಬಿ. ಹಿರೇಮಠ, ಹರಪನಹಳ್ಳಿಯ ಕೆ.ಎಂ. ಕೊಟ್ರೇಶಪ್ಪ ಇತರರಿದ್ದರು.

  ಶಶಿಧರ ಶಾಸ್ತ್ರಿಗಳು ಸ್ವಾಗತಿಸಿದರು. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಇದೇ ವೇಳೆ 8 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

  ಶ್ರೀಮಠದ ಅಧಿಕಾರ ವಹಿಸಿಕೊಂಡು 12 ವರ್ಷಗಳು ತುಂಬಿವೆ. ಲಿಂ. ಶಿವಾನಂದ ಶಿವಾಚಾರ್ಯರು ಹಾಕಿಕೊಟ್ಟ ದಾರಿಯಲ್ಲಿ ಸಾಗುವುದರ ಜೊತೆಗೆ ರಂಭಾಪುರಿ ಜಗದ್ಗುರುಗಳ ಅಂತಃಕರಣದ ಆಶೀರ್ವಾದಿಂದ ಮಠದ ಪ್ರಗತಿಯಾಗುತ್ತಿದೆ. ಸದ್ಭಕ್ತರ ಸಹಕಾರದಿಂದ ಭಕ್ತಭವನ ನಿರ್ವಣಗೊಂಡಿದೆ. ಮಠಕ್ಕೆ ಭಕ್ತರೇ ಆಸ್ತಿ, ಶಕ್ತಿಯಾಗಿದ್ದಾರೆ.
  | ಗುರುಶಾಂತೇಶ್ವರ ಶಿವಾಚಾರ್ಯರು, ಮಠದ ಅಧ್ಯಕ್ಷ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts