ಸವಣೂರ: ಮೃತದೇಹಗಳನ್ನು ಸಂಜೆ 5-20ಕ್ಕೆ ಪಟ್ಟಣಕ್ಕೆ ತರಲಾಯಿತು. ಎಲ್ಲ ಶವಗಳನ್ನು ಸಂಬಂಧಿಸಿದ ಕುಟುಂಬದವರಿಗೆ ಹಸ್ತಾಂತರಿಸಿದ ಬಳಿಕ ಮುಸ್ಲಿಂ ಸಮುದಾಯದ ಪ್ರಕಾರ ಎಲ್ಲ ವಿಧಿ ವಿಧಾನಗಳನ್ನು ಕೈಗೊಳ್ಳಲಾಯಿತು.
ಅಂತಿಮ ಯಾತ್ರೆ ಮೂಲಕ ಈದ್ಗಾ ಮೈದಾನಕ್ಕೆ ಆಗಮಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅಂತಿಮ ನಮನ ಸಲ್ಲಿಸಿದರು.
ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ, ಅಂಜುಮನ್ ಏ ಇಸ್ಲಾಂ ಸಮಿತಿ ಅಧ್ಯಕ್ಷ ಜೀಶಾನಅಹ್ಮದಖಾನ ಪಠಾಣ, ಶಾಸಕ ಯಾಸೀರಅಹ್ಮದ ಪಠಾಣ, ಪುರಸಭೆ ಅಧ್ಯಕ್ಷ ಅಲ್ಲಾವುದ್ದೀನ ಮನಿಯಾರ, ತಹಸೀಲ್ದಾರ್ ಭರತರಾಜ್ ಕೆ.ಎನ್., ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವ ನೀರಲಗಿ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಎಂ. ಜೆ. ಮುಲ್ಲಾ, ಫಜಲ್‌ಅಹ್ಮದ್‌ಖಾನ್ ಪಠಣ, ಪೀರ್‌ಅಹ್ಮದ್ ಗವಾರಿ, ಅಶೋಕ ಮನ್ನಂಗಿ, ಸಾದಿಕ್ ಮನಿಯಾರ, ಶಿವಕುಮಾರ ಅಡವಿಸ್ವಾಮಿಮಠ ಇತರರು ಪಾಲ್ಗೊಂಡಿದ್ದರು.
ಇದಕ್ಕೂ ಮೊದಲು ರಾಜ್ಯ ಸರ್ಕಾರ ಘೋಷಿಸಿದ್ದ 3 ಲಕ್ಷ ರೂ.ಗಳ ಪರಿಹಾರದ ಆದೇಶದ ಪತ್ರವನ್ನು ಕುಟುಂಬದ ವಾರಸುದಾರರಿಗೆ ಜಿಲ್ಲಾಧಿಕಾರಿಗಳು, ಶಾಸಕರು ವಿತರಿಸಿದರು.