ಏರ್‌ಸ್ಟ್ರೈಕ್‌ನಲ್ಲಿ ಮಸೂದ್ ಸಂಬಂಧಿ ಮೃತ ಖಚಿತ

< ನನ್ನ ದೇಶ ನನ್ನ ಪಾತ್ರ ಮಹಿಳೆಯರೊಂದಿಗೆ ಸಂವಾದದಲ್ಲಿ ಬಿ.ಎಲ್. ಸಂತೋಷ್ ಹೇಳಿಕೆ>

ಉಡುಪಿ: ದೇಶ ಸುರಕ್ಷಿತರ ಕೈಯಲ್ಲಿದೆ. ಇತ್ತೀಚೆಗೆ ನಡೆದ ಬಾಲಕೋಟ್ ಏರ್‌ಸ್ಟ್ರೈಕ್‌ನಲ್ಲಿ ಮಸೂದ್ ಅಜರ್‌ನ ನಾಲ್ವರು ಸಂಬಂಧಿಕರು ಮೃತರಾಗಿದ್ದಾರೆ. ಇದು ಸುಳ್ಳಾದರೆ ಫೇಸ್‌ಬುಕ್ ಲೈವ್‌ನಲ್ಲಿ ಮುಖ ತೋರಿಸಲಿ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದರು.

ಮಣಿಪಾಲ ಖಾಸಗಿ ಹೋಟೆಲ್‌ನಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಆಯೋಜಿಸಿದ್ದ ‘ನನ್ನ ದೇಶ ನನ್ನ ಪಾತ್ರ’ ಮಹಿಳೆಯರೊಂದಿಗಿನ ಸಂವಾದದಲ್ಲಿ ಮಾತನಾಡಿದರು.

2012ರಲ್ಲಿ ಅಂದಿನ ಡಿಆರ್‌ಡಿಒ ಮುಖ್ಯಸ್ಥ ಸಾರಸ್ವತ್ ಅವರು ಎಸ್ಯಾಟ್ ಯೋಜನೆಗೆ ಅನುಮತಿ ನೀಡುವಂತೆ ಮನಮೋಹನ್ ಸಿಂಗ್‌ಗೆ ಕಡತ ಸಲ್ಲಿಸಿದಾಗ ಅವರು ತಿರಸ್ಕರಿಸಿದ್ದರು. ಮೋದಿ ಅನುಮತಿ ನೀಡಿದ್ದರಿಂದ ಭಾರತದ ಘನತೆ ಹೆಚ್ಚಿದೆ ಎಂದರು.

ಗುಣಗ್ರಾಹಿ ಸರ್ಕಾರ: ಕೇಂದ್ರ ಸರ್ಕಾರ ಸಾಲುಮರದ ತಿಮ್ಮಕ್ಕ, ಸೂಲಗತ್ತಿ ನರಸಮ್ಮ ಮುಂತಾದ ನೈಜ ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದೆ. ದೇಶಕ್ಕೋಸ್ಕರ ಸೇವೆ ಸಲ್ಲಿಸಿದವರನ್ನು ಗುರುತಿಸುವ ಗುಣಗ್ರಾಹಿ ಸರ್ಕಾರ ನಮ್ಮದು ಎಂದು ಹೇಳಿದರು.

5 ವರ್ಷದ ಆಡಳಿತದಲ್ಲಿ ಮೋದಿ ರಾಜಕೀಯಕ್ಕೆ ಗೌರವವನ್ನು ತಂದಿದ್ದಾರೆ. ಜಾತಿ ರಾಜಕಾರಣ ಮಾಡಿಲ್ಲ ಎಂದರು.

ಹಿರಿಯ ವೈದ್ಯೆ ಡಾ.ಪುಷ್ಪಾ ಕಿಣಿ ಸಂವಾದ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕ ರಘುಪತಿ ಭಟ್, ಮುಖಂಡರಾದ ಯಶ್‌ಪಾಲ್ ಸುವರ್ಣ, ಉದಯಕುಮಾರ್ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ, ಜಿಪಂ ಸದಸ್ಯೆ ಶಿಲ್ಪಾ ಸುವರ್ಣ ಉಪಸ್ಥಿತರಿದ್ದರು. ಜಿಪಂ ಸದಸ್ಯೆ ರೇಶ್ಮಾ ಶೆಟ್ಟಿ ಸ್ವಾಗತಿಸಿ, ರಶ್ಮಿ ಬಾಲಕೃಷ್ಣ ಶೆಟ್ಟಿ ವಂದಿಸಿದರು. ತಾರಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಚುನಾವಣೆ ಸ್ಪರ್ಧೆ 75 ವರ್ಷ ಮಿತಿ: ಚುನಾವಣೆ ಸ್ಪರ್ಧಿಸಲು ಕನಿಷ್ಠ 25 ವರ್ಷ ಇದೆ, ಗರಿಷ್ಠ ವಯಸ್ಸು ಏಕಿಲ್ಲ ಎಂಬ ಸಭಿಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ಬಿ.ಎಲ್.ಸಂತೋಷ್, ನಮ್ಮ ಪಕ್ಷ ಈಗಾಗಲೇ ಅಲಿಖಿತವಾಗಿ ಗರಿಷ್ಠ 75 ವರ್ಷದ ಮಿತಿಯನ್ನು ಹಾಕಿಕೊಂಡಿದೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಜನರ ನಿರೀಕ್ಷೆ ಹೆಚ್ಚುತ್ತಿದೆ. ಇದಕ್ಕೆ ದೈಹಿಕ ಶ್ರಮ ಬೇಕಾಗುತ್ತದೆ. ಹೀಗಾಗಿ ನಾವೇ ಸ್ವಯಂ ನಿರ್ಬಂಧ ಹಾಕಿಕೊಂಡಿದ್ದೇವೆ ಎಂದರು.