ಸೇತುವೆ ಕುಸಿತ, ತಪ್ಪಿದ ಭಾರಿ ಅನಾಹುತ

<54ನೇ ಉಪ ಕಾಲುವೆ ಸೇತುವೆ ಮಾರ್ಗವಾಗಿ ಸಂಚಾರ ಸ್ಥಗಿತ>

ಮಸ್ಕಿ: ತುಂಗಭದ್ರಾ ಎಡದಂಡೆ ಮುಖ್ಯಕಾಲುವೆಯ 54ನೇ ಉಪ ಕಾಲುವೆ ಸೇತುವೆ ಸೋಮವಾರ ರಾತ್ರಿ ಕುಸಿದಿದ್ದು, ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಮಸ್ಕಿ-ತುರ್ವಿಹಾಳ ಪಟ್ಟಣಗಳ ಸಂಪರ್ಕ ಸ್ಥಗಿತಗೊಳಿದರು.

54ನೇ ಉಪಕಾಲುವೆ ಸೇತುವೆ ಸುಮಾರು 60 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಹಳೆಯದಾದ ಸೇತುವೆ ಮೇಲೆ ಭಾರಿ ಗಾತ್ರದ ವಾಹನಗಳ ಸಂಚಾರ ಹೆಚ್ಚಿದ್ದರಿಂದ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ.

ತಪ್ಪಿದ ಅನಾಹುತ: ತುಂಗಭದ್ರಾ ಎಡದಂಡೆ ನಾಲೆಯಲ್ಲಿ ಮೂರು ದಿನಗಳಿಂದ ನೀರು ಸ್ಥಗಿತಗೊಳಿಸಿದ್ದರಿಂದ ದೊಡ್ಡ ಅನಾಹುತವೇ ತಪ್ಪಿದಂತಾಗಿದೆ. ಒಂದು ವೇಳೆ ಕಾಲವೆಯಲ್ಲಿ ನೀರು ಹರಿಯುತ್ತಿದ್ದರೆ ಅನಾಹುತವಾಗುತ್ತಿತ್ತು.

ಸೇತುವೆ ಮಾರ್ಗವಾಗಿ ನಿತ್ಯ ಮರಳು ಸಾಗಣೆ ವಾಹನಗಳು ಸಂಚರಿಸುತ್ತಿದ್ದರಿಂದ ಸೇತುವೆ ಕುಸಿದಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಮುಂಜಾಗ್ರತ ಕ್ರಮವಾಗಿ ಮಸ್ಕಿ-ತುರ್ವಿಹಾಳ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಅಲ್ಲದೆ ಮೇರನಾಳ, ಗೋನಾಳ ಸೇರಿ ಇನ್ನಿತರ ಗ್ರಾಮಗಳಿಗೆ ಸಂಪರ್ಕ ಸ್ಥಗಿತಗೊಂಡಿದೆ.