ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿ

ಮಸ್ಕಿ/ಸಿಂಧನೂರು: ದೈಹಿಕ ಶಿಕ್ಷಣ ಶಿಕ್ಷಕ ದಿ.ಮಹಾದೇವಪ್ಪ ಮಸ್ಕಿ ಅವರ ಸ್ಮರಣಾರ್ಥ ಬಳಗಾನೂರಿನ ಉದಯ ಕ್ರೀಡಾ ಕ್ಲಬ್‌ನಿಂದ ಹೊನಲು ಬೆಳಕಿನ ರಾಜ್ಯ ಮಟ್ಟದ ಮುಕ್ತ ಖೋಖೋ ಪಂದ್ಯಾವಳಿ ಶನಿವಾರ ಜರುಗಿತು.

ದೈಹಿಕ ಶಿಕ್ಷಣ ಶಿಕ್ಷಕ ಚನ್ನಬಸವರಾಜ ಮೇಟಿ ಮಾತನಾಡಿ, ಸರಳ, ಸಜ್ಜನಿಕೆಗೆ ಹೆಸರಾಗಿದ್ದ ಕ್ರೀಡಾ ಮಾಂತ್ರಿಕ ಮಹಾದೇವಪ್ಪ ಮಸ್ಕಿ ಅವರು ಯುವಕರಲ್ಲಿ ಕ್ರೀಡಾ ಕೃಷಿ ಆರಂಭಿಸಿದ್ದರು. ಅವರ ಸ್ಮರಣಾರ್ಥವಾಗಿ ಖೋಖೋ ಪಂದ್ಯಾವಳಿ ಆಯೋಜಿಸುವ ಮೂಲಕ ಯುವಕರು ಗುರು ಮೆಚ್ಚುವಂಥ ಕೆಲಸ ಮಾಡಿದ್ದಾರೆ ಎಂದರು.

ಪ್ರಭಾರ ದೈಹಿಕ ಶಿಕ್ಷಣ ಅಧಿಕಾರಿ ಮಲ್ಲನಗೌಡ ಗುಡಗಲದಿನ್ನಿ, ಶಿವಪ್ಪ ಹಸಮಕಲ್, ಬಸವರಾಜ ಯಾದಗಿರಿ, ಶಿವಕುಮಾರ ಹಂಪರಗುಂದಿ, ದುರುಗೇಶ, ಸಿದ್ದರಾಮಯ್ಯ ಗಡ್ಡಿಮಠ ಮಾತನಾಡಿದರು. ಮುಖಂಡ ಕೆ.ರಾಘವೇಂದ್ರ ಜ್ಯೊತಿ ಬೆಳಗಿಸಿ ಪಂದ್ಯಾವಳಿ ಉದ್ಘಾಟಿಸಿದರು. ಬಿ.ಹುಚ್ಚರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕುಷ್ಟಗಿ ತಂಡ ಪ್ರಥಮ, ಸಿರಗುಪ್ಪ ತಂಡ ದ್ವಿತೀಯ ಹಾಗೂ ಪಟ್ಟಣದ ಉದಯ ಕ್ರೀಡಾ ಕ್ಲಬ್ ತಂಡ ತೃತೀಯ ಬಹುಮಾನ ಪಡೆದವು.