ಮಸ್ಕಿ: ತುಂಗಭದ್ರಾ ಎಡದಂಡೆ ಕಾಲುವೆ, 55 ನೇ ಉಪ ನಾಲೆ ಭಾಗದ ಹಳ್ಳಕ್ಕೆ ಅಳವಡಿಸಿರುವ ಪಂಪ್‌ಸೆಟ್‌ಗಳ ತೆರವು ಕಾರ್ಯಾಚರಣೆಗೆ ರೈತರು ಅಡ್ಡಿಪಡಿಸಿ, ನೀರಾವರಿ ಅಧಿಕಾರಿಗಳ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿದರು.

ಪೊಲೀಸರ ನೆರವಿನೊಂದಿಗೆ ಪಂಪ್‌ಸೆಟ್ ತೆರವು ಕಾರ್ಯಾಚರಣೆ ಕೈಗೊಂಡ ಇಂಜಿನಿಯರ್‌ಗಳನ್ನು ರೈತರು ತಡೆದು ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು. ಇಂಜಿನಿಯರ್‌ಗಳಾದ ದಾವೂದ್ ಹಾಗೂ ಮಂಜುನಾಥ ರೈತರ ಜತೆ ಮಾತನಾಡಿ ಅಕ್ರಮ ನೀರಾವರಿ ಬಗ್ಗೆ ಲೋಕಾಯುಕ್ತಗೆ ಕೆಲವರು ದೂರು ನೀಡಿದ್ದಾರೆ. ಲೋಕಾಯುಕ್ತರ ಆದೇಶದ ಪ್ರಕಾರ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ರೈತರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೈತರು ಮುನಿರಾಬಾದ್‌ನಿಂದ ಯರಮರಸ್ ವರೆಗಿನ ಎಲ್ಲ ರೈತರಿಗೆ ಮೊದಲು ನೋಟಿಸ್ ಕೊಡಿ. 0 ಮೈಲ್‌ನಿಂದ ತೆರವು ಕಾರ್ಯಾಚರಣೆ ಆರಂಭಿಸಿ ಎಂದು ಹೇಳಿದರು. ಹಠಕ್ಕೆ ಬಿದ್ದು ಪಂಪ್‌ಸೆಟ್‌ಗಳನ್ನು ತೆರವು ಮಾಡಿದರೆ ವಿಷ ಕುಡಿಯುವುದಾಗಿ ಬೆದರಿಕೆ ಹಾಕಿದರು.
ರೈತರ ಆಕ್ಷೇಪದಿಂದಾಗಿ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಅಲ್ಲಿವರೆಗೆ ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗುವುದು ಎಂದು ತಿಳಿಸಿದ ನಂತರ ರೈತರು ಅಲ್ಲಿಂದ ತೆರಳಿದರು.