ಇಂಜಿನಿಯರ್ ಅನುಪಸ್ಥಿತಿಯಲ್ಲಿ ಕೆಲಸ ನಿರ್ವಹಣೆ
ಮಸ್ಕಿ: ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ವೆಂಕಟಾಪುರ ಗ್ರಾಮಸ್ಥರು ಮಂಗಳವಾರ ಕಾಮಗಾರಿ ತಡೆದರು. ವೆಂಕಟಾಪುರ ಗ್ರಾಮದಿಂದ ಮಸ್ಕಿವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಗ್ರಾಮಸ್ಥರ ಹಲವು ವರ್ಷಗಳ ಮನವಿ ಮೇರೆಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 87 ಲಕ್ಷ ರೂ. ವೆಚ್ಚದಲ್ಲಿ 3 ಕಿಮೀ ಡಾಂಬರ್ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ ಇಂಜಿನಿಯರ್ ಹಾಗೂ ಗುತ್ತಿಗೆದಾರರ ನಿರ್ಲಕ್ಷೃದಿಂದ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಇಂಜಿನಿಯರ್ ಅನುಪಸ್ಥಿತಿಯಲ್ಲಿ ಗುತ್ತಿಗೆದಾರರು ಕಾಮಗಾರಿ ನಿರ್ವಹಿಸುತ್ತಿದ್ದು, ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆ. ಸಮ ಪ್ರಮಾಣದಲ್ಲಿ ಕಂಕರ್ ಹಾಕಿ ಮೆಟಲಿಂಗ್ ಮಾಡಿ ಅದರ ಮೇಲೆ ಡಾಂಬರೀಕರಣ ಮಾಡಬೇಕು. ಗುಣಮಟ್ಟದಿಂದ ಕಾಮಗಾರಿ ನಿರ್ವಹಿಸಬೇಕು. ಇಲ್ಲದಿದ್ದರೆ ಕೆಲಸ ಸ್ಥಗಿತಗೊಳಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಅಧಿಕಾರಿಗಳು ಕೆಲಸ ನಿಲ್ಲಿಸಿದರು. ಪಿಎಂಜಿಎಸ್ವೈ ಇಂಜಿನಿಯರ್ ಶಂಕರ್ ಬಂಡಿವಡ್ಡರ್ ಇತರರಿದ್ದರು.
ಇಲಾಖೆಯ ಇಂಜಿನಿಯರ್ ಅನುಪಸ್ಥಿತಿಯಲ್ಲಿ ಗುತ್ತಿಗೆದಾರರು ಕಾಮಗಾರಿಯನ್ನು ರಾತ್ರಿ ವೇಳೆ ಮಾಡುತ್ತಿದ್ದಾರೆ. ಅದಕ್ಕಾಗಿ ಗ್ರಾಮಸ್ಥರೆಲ್ಲರು ಸೇರಿ ಕಾಮಗಾರಿ ನಿಲ್ಲಿಸಿದ್ದೇವೆ. ಕೂಡಲೇ ಇಲಾಖೆ ಅಧಿಕಾರಿಗಳು ಗುತ್ತಿಗೆದಾರರಿಗೆ ಗುಣಮಟ್ಟದ ಕಾಮಗಾರಿ ಮಾಡಲು ಸೂಚಿಸಬೇಕು. ನಿರ್ಲಕ್ಷೃವಹಿಸಿದರೆ ಕಾಮಗಾರಿಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುವುದು ಎಂದು ಗ್ರಾಮಸ್ಥರಾದ ಹನುಮಂತಪ್ಪ ಹಾಗೂ ಇತರರು ಎಚ್ಚರಿಸಿದ್ದಾರೆ.
ಎಸ್ಟಿಮೇಟ್ ಪ್ರಕಾರ ಕಾಮಗಾರಿ ಮಾಡಲಾಗುತ್ತಿದೆ. ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗುವುದು.
|ಶಂಕರ್ ಬಂಡಿವಡ್ಡರ್ ಸೆಕ್ಷನ್ ಅಧಿಕಾರಿ