ಜಪ್ತಿ ವಾಹನಗಳಿಗೆ ಧೂಳು, ತಕ್ಕು; ಮಸ್ಕಿ ಠಾಣೆ ಆವರಣದಲ್ಲಿ ಇಟ್ಟಲ್ಲಿಯೇ ಹಾಳು, ನಡೆಯದ ಹರಾಜು ಪ್ರಕ್ರಿಯೆ

ವೀರೇಶ್ ಸೌದ್ರಿ ಮಸ್ಕಿ
ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಾಹನಗಳನ್ನು ಮಾಲೀಕರಿಗೆ ಹಸ್ತಾಂತರ ಹಾಗೂ ಹರಾಜು ಪ್ರಕ್ರಿಯೆ ನಡೆಯದ ಕಾರಣ ಪೊಲೀಸ್ ಠಾಣೆ ಆವರಣದಲ್ಲೇ ಧೂಳಿನೊಂದಿಗೆ ತುಕ್ಕು ಹಿಡಿದು ಹಾಳಾಗುತ್ತಿವೆ. ಜೂಜಾಟ, ರಸ್ತೆ ಅಪಘಾತ, ರಸ್ತೆ ನಿಯಮ ಉಲ್ಲಂಘನೆ, ಕಳ್ಳತನ ಸೇರಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ದ್ವಿಚಕ್ರ ವಾಹನಗಳು, ಕ್ರೂಸರ್, ಟ್ರಾೃಕ್ಟರ್, ಆಟೋ ಹಾಗೂ ಕಾರುಗಳನ್ನು ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಇಡಲಾಗಿದೆ. ಜಪ್ತಿ ಮಾಡಿದ ವಾಹನಗಳನ್ನು ಇಂತಿಷ್ಟು ದಿನಗಳಲ್ಲಿ ಬಹಿರಂಗ ಹರಾಜು ಮಾಡಬೇಕು ಎನ್ನುವ ನಿಯಮವಿದೆ. ಆದರೆ, ಇಲ್ಲಿ ಕಾನೂನು ಪಾಲನೆಯಾಗಿಲ್ಲ ಎಂಬ ಆರೋಪವಿದೆ.

ಠಾಣೆಗೆ ಬರಲು ಭಯ: ಅಪಘಾತ, ಜೂಜಾಟ ಸಂದರ್ಭದಲ್ಲಿ ವಾಹನ ಮಾಲೀಕರು ಪೊಲೀಸರ ಭಯದಿಂದ ವಾಹನಗಳನ್ನು ಅಲ್ಲೇ ಬಿಟ್ಟು ಪರಾರಿಯಾಗುತ್ತಾರೆ. ಇಂಥ ಸಮಯದಲ್ಲಿ ವಶಕ್ಕೆ ಪಡೆದ ವಾಹನಗಳನ್ನು ಬಿಡಿಸಿಕೊಳ್ಳಲು ಬಹುತೇಕರು ಹಿಂದೇಟು ಹಾಕುತ್ತಾರೆ. ಠಾಣೆಗೆ ಹೋದರೆ ಎಲ್ಲಿ ತಮ್ಮ ಮೇಲೆ ಪ್ರಕರಣ ದಾಖಲಿಸುತ್ತಾರೋ ಎಂಬ ಭಯಕ್ಕೆ ಗಾಡಿ ಹೋದರೆ ಹೋಗಲಿ ಎಂದು ಮಾಲೀಕರು ಠಾಣೆ ಕಡೆ ಕಾಲಿಡುತ್ತಿಲ್ಲ ಎನ್ನಲಾಗಿದೆ. ವಾಹನಗಳನ್ನು ಬಳಸದ ಕಾರಣ ಟಯರ್, ವಾಹನದ ಬಿಡಿ ಭಾಗಗಳು ಸಂಪೂರ್ಣ ಹಾಳಾಗಿವೆ.

ಹರಾಜು ಕರೆದಿಲ್ಲ
ಜಪ್ತಿ ಮಾಡಿಕೊಂಡ ವಾಹನಗಳನ್ನು ಹರಾಜು ಮಾಡುವುದಕ್ಕೆ ನ್ಯಾಯಾಲಯ ಅನುಮತಿ ಪಡೆಯಬೇಕು. ಇಂಥ ವಾಹನಗಳನ್ನು ಆರ್‌ಟಿಒ ಅಧಿಕಾರಿಗಳು ತಪಾಸಣೆ ನಡೆಸಿ ಕಂಡೀಷನ್, ಸಾಮರ್ಥ್ಯ ಹಾಗೂ ಅದರ ಮೌಲ್ಯ ನಿರ್ಧರಿಸಬೇಕು. ಇದೆಲ್ಲ ಮುಗಿದ ಬಳಿಕ ನ್ಯಾಯಾಲಯದ ಅನುಮತಿ ಮೇರೆಗೆ ಬಹಿರಂಗ ಹರಾಜು ನಡೆಸಿ ಬಿಡ್ ಮಾಡಿದವರಿಗೆ ವಾಹನಗಳನ್ನು ಹಸ್ತಾಂತರಿಸಬೇಕು. ಆದರೆ, ಈ ಬಗ್ಗೆ ಯಾರೂ ಆಸಕ್ತಿ ವಹಿಸದ ಕಾರಣ ವಾಹನಗಳು ಇಟ್ಟಲ್ಲಿಯೇ ಹಾಳಾಗುತ್ತಿವೆ ಎಂಬುದು ಸಾರ್ವಜನಿಕರ ದೂರಾಗಿದೆ.

ಮಸ್ಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಾಹನಗಳ ಮಾಲೀಕರ ಪತ್ತೆಗಾಗಿ ಪ್ರಯತ್ನಿಸಲಾಗುತ್ತಿದೆ. ಅಲ್ಲದೇ ಅಂಥ ವಾಹನಗಳನ್ನು ನ್ಯಾಯಾಲಯ ಹಾಗೂ ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಹರಾಜು ಹಾಕಲಾಗುವುದು.
| ಚನ್ನಯ್ಯ ಹಿರೇಮಠ ಸಿಪಿಐ, ಮಸ್ಕಿ

Leave a Reply

Your email address will not be published. Required fields are marked *