ಮಾಧ್ಯಮಗಳಿಂದ ಜಾನಪದ ಕಲೆಗೆ ಕುತ್ತು

<ಶಾಸಕ ಪ್ರತಾಪಗೌಡ ಪಾಟೀಲ ಕಳವಳ ಜಾನಪದ ಕಲಾ ಸಂಭ್ರಮ>

ಮಸ್ಕಿ(ರಾಯಚೂರು): ಸಿನಿಮಾ, ಟಿವಿ ಸೇರಿ ಆಧುನಿಕ ಸಂವಹನ ಮಾಧ್ಯಮಗಳಿಂದ ಈ ನೆಲದ ಜಾನಪದ ಕಲೆಗಳು ನಶಿಸುತ್ತಿವೆ ಎಂದು ಶಾಸಕ ಪ್ರತಾಪಗೌಡ ಪಾಟೀಲ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಗಚ್ಚಿನಮಠದ ಆವರಣದಲ್ಲಿ ಬಹುರೂಪಿ ಚೌಡಯ್ಯ ಹಗಲುವೇಷ ಕಲಾವಿದರ ಸಂಘದಿಂದ ಹಮ್ಮಿಕೊಂಡಿದ್ದ ಜಾನಪದ ಕಲಾ ಸಂಭ್ರಮ ಉದ್ಘಾಟಿಸಿ ಮಾತನಾಡಿದರು. ಜಾನಪದ ಹಳ್ಳಿಯ ಸೊಗಡು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. ವಿವಿಧೆಡೆಯಿಂದ ಆಗಮಿಸಿದ್ದ 20ಕ್ಕೂ ಹೆಚ್ಚು ಜಾನಪದ ಕಲಾ ತಂಡಗಳು ಗಮನ ಸೆಳೆದವು. ಲಿಂಗಸುಗೂರಿನ ಗಾಳೆಪ್ಪ, ಗಂಗಮ್ಮ ಹೇಳಿದ ಬುರ‌್ರಕಥೆ, ಕೃಷ್ಣಪ್ಪ ತಂಡದ ಜಾನಪದ ಗೀತೆಗಳು ಜನಮನ ಸೊರೆಗೊಳಿಸಿದವು.

ಮುಖಂಡರಾದ ಕೆ.ವೀರನಗೌಡ, ಮಹಾದೇವಪ್ಪಗೌಡ ಪೊಪಾ, ಅಂದಾನಪ್ಪ ಗುಂಡಳ್ಳಿ, ಕಸಾಪ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಮಹಾಂತೇಶ ಮಸ್ಕಿ, ಕಸಾಪ ತಾಲೂಕು ಅಧ್ಯಕ್ಷ ಘನಮಠದಯ್ಯ ಸಾಲಿಮಠ, ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ನಾಗಭೂಷಣ, ಹಗಲುವೇಷಗಾರರ ಸಂಘದ ಅಧ್ಯಕ್ಷ ಅಮರೇಶ ಹಸಮಕಲ್, ಕಾರ್ಯದರ್ಶಿ ಜಂಬಣ್ಣ ಹಸಮಕಲ್ ಇತರರಿದ್ದರು.