ಮಸ್ಕಿ: ಪಟ್ಟಣದ ತಾಪಂ ಕಚೇರಿಯಲ್ಲಿ ಜಾನುವಾರುಗಳ ಸಾಮೂಹಿಕ ಲಸಿಕಾ ಅಭಿಯಾನದ ಪೋಸ್ಟರ್ ಅನ್ನು ಖಾದಿ ಗ್ರಾಮದ್ಯೋಗ ನಿಗಮ ಮಂಡಳಿ ಅಧ್ಯಕ್ಷ, ಶಾಸಕ ಬಸನಗೌಡ ತುರ್ವಿಹಾಳ ಗುರುವಾರ ಬಿಡುಗಡೆಗೊಳಿಸಿದರು.
ಪಶು ಸಂಗೋಪನೆ ಇಲಾಖೆ ಮೂಲಕ ಸರ್ಕಾರ ರೈತರ ಅನುಕೂಲಕ್ಕೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಯೋಜನೆಗಳ ಬಗ್ಗೆ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಬೇಕು. ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಲಸಿಕಾ ಅಭಿಯಾನದ ಮಾಹಿತಿ ರೈತರಿಗೆ ನೀಡಿ, ಅಭಿಯಾನ ಯಶಸ್ವಿ ಗೊಳಿಸಬೇಕು ಎಂದು ಶಾಸಕ ಬಸನಗೌಡ ತುರ್ವಿಹಾಳ ಹೇಳಿದರು.
ಪಶು ಇಲಾಖೆ ಜಂಟಿ ನಿರ್ದೇಶಕ ಡಾ.ಎಸ್.ಎಸ್. ಪಾಟೀಲ್ ಮಾತನಾಡಿ, ಜಾನುವಾರುಗಳಿಗೆ ಕಾಲು, ಬಾಯಿ ರೋಗ ತಡೆಗಟ್ಟಲು ಲಸಿಕಾ ಅಭಿಯಾನ ಆರಂಭಿಸಲಾಗಿದೆ ಎಂದರು. ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ. ಅಮರೇಗೌಡ, ತಾಪಂ ಇಒ ಅಮರೇಶ ಯಾದವ್, ಪ್ರಮುಖರಾದ ಸೋಮನಗೌಡ ಪಾಟೀಲ್, ವಿನೋದ ಗುಪ್ತಾ ಇತರರಿದ್ದರು.