ಸಿನಿಮಾ ನಟರನ್ನು ನೋಡಿ ಯಾರೂ ಮತ ಹಾಕಲ್ಲ

ಮಸ್ಕಿ : ಸಿನಿಮಾ ನಟರನ್ನು ನೋಡಿ ಯಾರೂ ಮತ ಹಾಕುವುದಿಲ್ಲ, ರಾಜ್ಯದ ಮತದಾರರು ಬುದ್ಧಿವಂತರು ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿ, ಈ ಹಿಂದೆ ರಾಯಚೂರು ಹಾಗೂ ಸಿಂಧನೂರಿಗೆ ಎನ್‌ಟಿಆರ್ ಪ್ರಚಾರಕ್ಕೆ ಬಂದಾಗ ಲಕ್ಷಾಂತರ ಜನರು ಸೇರಿದ್ದರು. ಆದರೆ ಅವುಗಳೆಲ್ಲ ಮತಗಳಾಗಿ ಪರಿವರ್ತನೆಯಾಗದೆ ಚುನಾವಣೆಯಲ್ಲಿ ಸೋಲುವಂತಾಗಿತ್ತು. ಅಲ್ಲದೆ ಹಲವು ಬಾರಿ ರಾಜಕೀಯ ನಾಯಕರ ಪರ ಚಿತ್ರ ನಟರು ಪ್ರಚಾರ ಮಾಡಿದರೂ ಸೋತಿರುವ ಉದಾಹರಣೆಗಳಿವೆ. ಇದು ತಮಿಳುನಾಡು ರಾಜಕೀಯ ಅಲ್ಲ, ರಾಜ್ಯದಲ್ಲಿ ಬುದ್ಧಿವಂತರಿದ್ದಾರೆ ಎಂದು ಪರೋಕ್ಷವಾಗಿ ಮಂಡ್ಯದ ಲೋಕಸಭೆ ಚುನಾವಣೆಯಲ್ಲಿ ಪ್ರಚಾರಕ್ಕಿಳಿದ ಚಿತ್ರ ನಟರಿಗೆ ಟಾಂಗ್ ನೀಡಿದರು.

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಯೂ ನಟನಾಗಿ ಹೋದರೆ ಗೆಲ್ಲವುದಕ್ಕೆ ಆಗುವುದಿಲ್ಲ, ಕುಮಾರಸ್ವಾಮಿ ಪುತ್ರನಾಗಿ ಗೆಲ್ಲಬೇಕು ಎಂದರು. ಲೋಕಸಭೆ ಸೀಟು ಹೊಂದಾಣಿಕೆ ಮುಗಿದ ಅಧ್ಯಾಯ. ಆದರೆ, ಸ್ಥಳೀಯವಾಗಿ ಹೊಂದಾಣಿಕೆ ಆಗಲು ಸ್ವಲ್ಪ ಸಮಯವಾಗುತ್ತದೆ. ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಯಾರೇ ಅಭ್ಯರ್ಥಿಯಾದರೂ ಸಂಪೂರ್ಣ ಬೆಂಬಲ ನೀಡಿ ಗೆಲ್ಲಿಸಲಾಗುವುದು ಎಂದರು.