ಬೆಳೆಗೆ ನೀರು ಬಿಡಲು ನಿರ್ಣಯ

ಮಸ್ಕಿ: ಮಸ್ಕಿ ನಾಲಾ ಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತು ಜೋಳ, ಕಡಲೆ, ಸಜ್ಜಿ ಬೆಳೆಗೆ ಒಂದು ತಿಂಗಳವರೆಗೆ ಅಥವಾ ಜಲಾಶಯದಲ್ಲಿನ ನೀರಿನ ಪ್ರಮಾಣ ನೋಡಿಕೊಂಡು ನೀರು ಬಿಡಲು ತೀರ್ಮಾನ ಕೈಗೊಳ್ಳಲಾಯಿತು.

ಮಸ್ಕಿ ನಾಲಾ ಅಚ್ಚುಕಟ್ಟು ಪ್ರದೇಶದಲ್ಲಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ, ಲಿಂಗಸುಗೂರು ಸಹಾಯಕ ಆಯುಕ್ತ ಎಂ.ಪಿ.ಮಾರುತಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಅಚ್ಚುಕಟ್ಟು ಪ್ರದೇಶದ ರೈತರಾದ ಶರಣಗೌಡ ಕಾಟಗಲ್, ಹನುಮಂತಪ್ಪ ವೆಂಕಟಾಪುರ, ಮೌನೇಶ ಉಸ್ಕಿಹಾಳ ಮಾತನಾಡಿ, ಜಲಾಶಯದಿಂದ ನೀರು ಬಿಡದಿದ್ದರೆ ಬೆಳೆ ಒಣಗಿ, ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಕೂಡಲೇ ಜಲಾಶಯದಿಂದ ನೀರು ಬಿಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸಿ ಎಂ.ಪಿ.ಮಾರುತಿ, ಜಲಾಶಯದ ನೀರಿನ ಗರಿಷ್ಠ ಮಟ್ಟ 0.50 ಟಿಎಂಸಿ (28 ಅಡಿ) ಇದೆ. ಸದ್ಯ ಜಲಾಶಯದ ನೀರಿನ ಮಟ್ಟ 0.17 ಟಿಎಂಸಿ (ಹತ್ತು ಅಡಿ) ಇದೆ. ನೀರಿನ ಲಭ್ಯತೆ ಆಧಾರದ ಮೇಲೆ ರೈತರ ಬೆಳೆಗೆ ನೀರು ಕೊಡಲಾಗುವುದು ಎಂದು ತಿಳಿಸಿದರು.

ಅಚ್ಚುಕಟ್ಟು ಪ್ರದೇಶದ ರೈತರ ಹೊಲಗಳಿಗೆ ನಿರುಣಿಸುವ ಎಡ ಹಾಗೂ ಬಲದಂಡೆ ಕಾಲುವೆಗಳು ಹೂಳು ತುಂಬಿವೆ. ಉದ್ಯೋಗ ಖಾತ್ರಿ ಯೋಜನೆಯಡಿ ಕಾಲುವೆ ಹೂಳು ತೆಗೆಸುವ ಸಂಬಂಧ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ತಹಸೀಲ್ದಾರ್ ಬಲರಾಮ ಕಟ್ಟಿಮನಿ, ಮಸ್ಕಿ ನಾಲಾ ಯೋಜನೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ದಾವುದ್, ತಾಪಂ ಸದಸ್ಯ ಮೌನೇಶ, ಅಂಕುಶದೊಡ್ಡಿ ಗ್ರಾಪಂ ಅಧ್ಯಕ್ಷ ಬಸವರಾಜ, ಬಸಪ್ಪ ವೆಂಕಟಾಪುರ, ಅಚ್ಚುಕಟ್ಟು ಪ್ರದೇಶದ ರೈತರು ಭಾಗವಹಿಸಿದ್ದರು.