ಗಂಗಾವತಿ: ಸಾಮಾಜಿಕ ಭದ್ರತೆ ಯೋಜನೆಯಡಿ ಮಾಸಾಶನ ಮಂಜೂರು ಮತ್ತು ವಿತರಣೆ ವಿಳಂಬ ಖಂಡಿಸಿ ನಗರದ ಮಿನಿವಿಧಾನಸೌಧದ ಮುಂಭಾಗ ರಾಜ್ಯ ಅಂಗವಿಕಲರ ಮತ್ತು ಪಾಲಕರ ಒಕ್ಕೂಟದ ತಾಲೂಕು ಸಮಿತಿ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತಗೆ ಮನವಿ ಸಲ್ಲಿಸಿದರು.
ಸಮಿತಿಯ ತಾಲೂಕಾಧ್ಯಕ್ಷ ಅಶೋಕ ಗುಡಿಕೋಟಿ ಮಾತನಾಡಿ, ಸಾಮಾಜಿಕ ಭದ್ರತೆ ಯೋಜನೆಯಡಿ ಅಂಗವಿಕಲರ ಮಾಸಾಶನ ಮಂಜೂರಲ್ಲಿ ವಿಳಂಬವಾಗುತ್ತಿದ್ದು, ಕೆಲ ಕುಟುಂಬಗಳು ಭಿಕ್ಷೆ ಬೇಡುವ ಸ್ಥಿತಿ ಬಂದಿದೆ. ಮಂಜೂರಾದ ಬಹುತೇಕರಿಗೆ ಮಾಸಾಶನ ನಾಲ್ಕು ತಿಂಗಳಿಂದ ವಿತರಣೆಯಾಗಿಲ್ಲ. ವಿಧವಾ ಮತ್ತು ವೃದ್ಧಾಪ್ಯ ವೇತನ ವಿತರಣೆಯಲ್ಲೂ ಲೋಪವಾಗುತ್ತಿದ್ದು, ಶೇ.60 ಅಂಗವಿಕಲರು ಪರಾವಲಂಭಿಗಳಾಗಿದ್ದಾರೆ. ಪ್ರತಿ ತಿಂಗಳು ಮಾಸಾಶನ ವಿತರಣೆ, ಶೇ.70 ಅಂಗವೈಕಲ್ಯ ಹೊಂದಿವರಿಗೆ ಮಾಸಿಕ 3000ರೂ., ಸರ್ಕಾರಿ ಉದ್ಯೋಗದಲ್ಲಿ ಆದ್ಯತೆ, ವಿವಿಧ ಇಲಾಖೆಗಳಲ್ಲಿ ಶೇ.5 ಅನುದಾನ ಮೀಸಲು, ಅವರ ಮಕ್ಕಳಿಗೆ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ಒಕ್ಕೂಟದ ರಾಜ್ಯ ಸಮಿತಿ ಸದಸ್ಯ ಬಸವರಾಜ ಗೋನಾಳ್, ಸದಸ್ಯರಾದ ಜೆ.ಉಮೇಶ, ಮಂಜುನಾಥ ಹೊಸ್ಕೇರಾ, ಯಮನೂರ, ಅಶೋಕ ವಡ್ಡರಹಟ್ಟಿ, ಯಲ್ಲಪ್ಪ, ಕರಿಯಪ್ಪ, ಜಾರ್, ಕರಿಯಮ್ಮ, ಪಾರ್ವತಿ, ಶಿಲ್ಪಾ ಇತರರಿದ್ದರು.