ಚಿತ್ರ: ಮರ್ಯಾದೆ ಪ್ರಶ್ನೆ
ನಿರ್ದೇಶನ: ನಾಗರಾಜ್ ಸೋಮಯಾಜಿ
ನಿರ್ಮಾಣ: ಸಖತ್ ಸ್ಟುಡಿಯೋ
ತಾರಾಗಣ: ಸುನೀಲ್ ರಾವ್, ರಾಕೇಶ್ ಅಡಿಗ, ತೇಜು ಬೆಳವಾಡಿ, ಪೂರ್ಣಚಂದ್ರ ಮೈಸೂರು, ಶೈನ್ ಶೆಟ್ಟಿ, ಪ್ರಭು ಮುಂಡ್ಕೂರು ಮತ್ತಿತರರು
ಶಿವ ಸ್ಥಾವರಮಠ
ಫುಡ್ ಡೆಲಿವೆರಿ ಬಾಯ್ ಸತೀಶ್ (ಸುನೀಲ್ ರಾವ್)ನನ್ನು ಪೊಲೀಸರು ಪೆಟ್ಟಿ ಕೇಸ್‌ನಲ್ಲಿ ವಶಕ್ಕೆ ಪಡೆದಿರುತ್ತಾರೆ. ವಿಷಯ ತಿಳಿದು ಗೆಳೆಯರಾದ ಸೂರಿ (ರಾಕೇಶ್ ಅಡಿಗ), ಮಂಜು (ಪೂರ್ಣಚಂದ್ರ ಮೈಸೂರು) ಪೊಲೀಸ್ ಠಾಣೆಗೆ ಬರುತ್ತಾರೆ. ಆಗ ಸಿಟ್ಟಿನಿಂದ ಸೂರಿ, ಪೊಲೀಸರಿಗೆ ‘ಸರ್, ನಾವು ಬಡವ್ರೇ ಇರಬಹುದು, ಕ್ರಿಮಿನಲ್‌ಗಳಲ್ಲ’ ಎನ್ನುತ್ತಾನೆ. ಇದೊಂದೇ ಲೈನ್ ಸಾಕು ಇಡೀ ‘ಮರ್ಯಾದೆ ಪ್ರಶ್ನೆ’ ಚಿತ್ರದ ತಿರುಳು ತೆರೆದಿಡಲು.
ಸೂರಿ, ಸತೀಶ್ ಹಾಗೂ ಮಂಜು ಮೂವರು ಪ್ರಾಣ ಸ್ನೇಹಿತರು. ಜತೆಗೆ ಮೂವರಿಗೂ ತಮ್ಮದೇ ಹೊಣೆಗಾರಿಕೆಗಳು. ಅದನ್ನು ನಿರ್ವಹಿಸಬೇಕಾದರೆ ಮೂವರು ಹಂಚಿಕೊಂಡೆ ಮುನ್ನಡೆಯುತ್ತಿರುತ್ತಾರೆ. ಒಂದು ಅವಘಡದಿಂದ ಇಡೀ ಮೂವರ ಜೀವನದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸುತ್ತದೆ. ಅಲ್ಲಿಂದ ಕಥೆಯ ದಿಕ್ಕೇ ಬದಲಾಗುತ್ತದೆ. ಹಾಗಾದ್ರೆ, ಮುಂದಿನ ಕಥೆಯೇನು ಎಂಬುದನ್ನು ತಿಳಿಯಬೇಕಾದರೆ ನೀವು ಸಿನಿಮಾ ಮಂದಿರಕ್ಕೆ ಹೋಗಿ ನೋಡಿದರೆ ಚೆಂದ.
ಆರ್.ಜೆ.ಪ್ರದೀಪ್ ಕಥೆಯನ್ನು ನಿರ್ದೇಶಕ ನಾಗರಾಜ್ ಸೋಮಯಾಜಿ ‘ಮರ್ಯಾದೆ ಪ್ರಶ್ನೆ’ ಚಿತ್ರದ ಮೂಲಕ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ. ಬೆಂಗಳೂರು ಎಂಬ ಮಹಾನಗರದಲ್ಲಿ ಬದುಕು ಹರಿಸಿ ಬರುವವರ ಬವಣೆ, ಅಸಹಾಯಕತೆ ಹಾಗೂ ಎದುರಿಸುವ ಸಂಕೋಲೆಗಳನ್ನು ಇಲ್ಲಿ ತೋರಿಸಲಾಗಿದೆ. ಒಟ್ಟಾರೆಯಾಗಿ ಇದು ಮಧ್ಯಮವರ್ಗದವರ ಕಥೆ. ಅವರ ಪ್ರತಿ ನಾಡಿಮಿಡಿತವನ್ನು ಸರಿಯಾಗಿ ಅರ್ಥೈಸಿಕೊಂಡು, ಸರಿಯಾದ ದಾಟಿಯಲ್ಲಿಯೇ ನಿರೂಪಿಸಲಾಗಿದೆ. ಈ ಮಹಾನಗರದ ಓಡಾಟದಲ್ಲಿ ದಿನ ಕಾಣ ಸಿಗುವ ಕ್ಯಾಬ್ ಡ್ರೈವರ್, ುಡ್ ಡೆಲಿವೆರಿ ಬಾಯ್, ರಾಜಕೀಯ ಕಾರ್ಯಕರ್ತರು ಇಂತಹ ಪಾತ್ರಗಳಿಂದಲೇ ಮನಸ್ಸಿಗೆ ಹತ್ತಿರವಾಗುವಂತೆ ಕಥೆ ಹೆಣೆಯಲಾಗಿದೆ. ಹೀಗಾಗಿ, ಈ ಸಿನಿಮಾ ಎಲ್ಲರ ಬದುಕಿಗೆ ಆಪ್ಯಾಯಮಾನ ಎನಿಸುತ್ತದೆ.
ರಾಕೇಶ್ ಅಡಿಗ, ಪೂರ್ಣಚಂದ್ರ ಮೈಸೂರು, ಸುನೀಲ್ ರಾವ್ ಕಾಂಬಿನೇಶನ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ಇನ್ನು, ತೇಜು ಬೆಳವಾಡಿ ಕಣ್ಣಲ್ಲೇ ನಟಿಸಿದ್ದು, ಮತ್ತೊಮ್ಮೆ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ಪ್ರಭು ಮುಂಡ್ಕೂರು, ಶೈನ್ ಶೆಟ್ಟಿ, ರೇಖಾ ಕೂಡ್ಲಿಗಿ, ನಾಗೇಂದ್ರ ಷಾ ಪಾತ್ರಗಳು ಕೂಡ ಗಮನಸೆಳೆಯುತ್ತವೆ. ಸಂದೀಪ್ ವೆಲ್ಲೂರಿ ಇಡೀ ಬೆಂಗಳೂರನ್ನು ಅದ್ಭುತವಾಗಿ ಕ್ಯಾಮರಾ ಮೂಲಕ ಸೆರೆಹಿಡಿದ್ದಾರೆ. ಪ್ರತೀ ದೃಶ್ಯಗಳು ನೋಡಿಸಿಕೊಳ್ಳುತ್ತವೆ. ಅರ್ಜುನ್ ರಾಮ್ ಸಂಗೀತ ಇಂಪಾಗಿದೆ.