ವಿಶ್ವ ಬಾಕ್ಸಿಂಗ್ ಎಂಟರ ಘಟ್ಟಕ್ಕೆ ಮೇರಿ, ಮಂಜು

ಉಲನ್ ಉಡೆ (ರಷ್ಯಾ): ಆರು ಬಾರಿಯ ಚಾಂಪಿಯನ್ ಎಂಸಿ ಮೇರಿ ಕೋಮ್ ಮತ್ತು ಮಂಜು ರಾಣಿ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್​ಷಿಪ್​ನಲ್ಲಿ ಕ್ವಾರ್ಟರ್​ಫೈನಲ್ ಪ್ರವೇಶಿಸಿದ್ದಾರೆ. 36 ವರ್ಷದ ಮೇರಿ ಕೋಮ್ 16ರ ಘಟ್ಟದ ಪಂದ್ಯದಲ್ಲಿ ಥಾಯ್ಲೆಂಡ್​ನ ಜುಟಮಸ್ ಜಿಟ್​ಪಾಂಗ್ ವಿರುದ್ಧ 5-0 ಅಂತರದಿಂದ ಗೆಲುವು ದಾಖಲಿಸಿದರು. ಅನುಭವಿ ಮೇರಿ ಕೋಮ್ ವಿರುದ್ಧ ಜಿಟ್​ಪಾಂಗ್ ಆಕ್ರಮಣಕಾರಿ ನಿರ್ವಹಣೆಯೊಂದಿಗೆ ಕೆಚ್ಚೆದೆಯ ಹೋರಾಟ ಪ್ರದರ್ಶಿಸಿದರೂ, ಸಮರ್ಥ ಹೊಡೆತಗಳನ್ನು ನೀಡಲಾಗದೆ ಚಡಪಡಿಸಿದರು. ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ 3ನೇ ಶ್ರೇಯಾಂಕಿತೆ ಮೇರಿ, ಮೊದಲ 3 ನಿಮಿಷಗಳಲ್ಲಿ ಎದುರಾಳಿಯ ಆಟದ ಶೈಲಿಯನ್ನು ಅಂದಾಜಿಸಿದರು. ಬಳಿಕ ಪಂದ್ಯದ ಮೇಲೆ ಪೂರ್ಣ ಪ್ರಾಬಲ್ಯ ಸಾಧಿಸಿದರು. ಮೇರಿ 51 ಕೆಜಿ ವಿಭಾಗದಲ್ಲಿ ಮೊದಲ ವಿಶ್ವ ಪದಕದ ನಿರೀಕ್ಷೆಯಲ್ಲಿದ್ದಾರೆ.

ಮಂಜು ಮುನ್ನಡೆ: ಸೋಮವಾರ ನಡೆದ 48 ಕೆಜಿ ವಿಭಾಗದ ಪ್ರಿ ಕ್ವಾರ್ಟರ್​ಫೈನಲ್​ನಲ್ಲಿ ಮಂಜು ರಾಣಿ, ವೆನೆಜುವೇಲಾದ ರೋಜಸ್ ಟಯೊನಿಸ್ ಸೆಡೆನೊ ವಿರುದ್ಧ 5-0ಯಿಂದ ಗೆಲುವು ಕಂಡರು. ಗುರುವಾರ ನಡೆಯಲಿರುವ ಎಂಟರ ಘಟ್ಟದ ಪಂದ್ಯದಲ್ಲಿ ಮಂಜು, ಕಳೆದ ಆವೃತ್ತಿಯ ಕಂಚು ವಿಜೇತೆ ಹಾಗೂ ಅಗ್ರ ಶ್ರೇಯಾಂಕಿತೆ ದಕ್ಷಿಣ ಕೊರಿಯಾದ ಕಿಮ್ ಹ್ಯಾಂಗ್-ಮಿ ವಿರುದ್ಧ ಸೆಣಸಲಿದ್ದಾರೆ. -ಪಿಟಿಐ

ಸ್ವೀಟಿ ಬೋರಾ ಔಟ್

ಮಾಜಿ ರಜತ ವಿಜೇತೆ ಸ್ವೀಟಿ ಬೋರಾ 75 ಕೆಜಿ ವಿಭಾಗದ ಪ್ರಿ ಕ್ವಾರ್ಟರ್​ಫೈನಲ್ ಪಂದ್ಯದಲ್ಲಿ 2ನೇ ಶ್ರೇಯಾಂಕಿತೆ ವೇಲ್ಸ್​ನ ಲೌರೆನ್ ಪ್ರೖೆಸ್ ವಿರುದ್ಧ 1-3 ಅಂತರದಿಂದ ಸೋಲು ಕಂಡು ಹೊರಬಿದ್ದರು. ಕಳೆದ ಆವೃತ್ತಿಯ ಕಂಚು ವಿಜೇತೆ ಹಾಗೂ ಹಾಲಿ ಕಾಮನ್ವೆಲ್ತ್ ಗೇಮ್್ಸ ಚಾಂಪಿಯನ್ ಲೌರೆನ್ ಪ್ರೖೆಸ್ ವಿರುದ್ಧ ಸ್ವೀಟಿ ನಿಕಟ ಹೋರಾಟ ಪ್ರದರ್ಶಿಸಿದರೂ, ಗೆಲುವಿನ ನಗೆ ಬೀರಲು ಸಾಧ್ಯವಾಗಲಿಲ್ಲ.

Leave a Reply

Your email address will not be published. Required fields are marked *