Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಈ ದೇಶದಲ್ಲಿ ಮತ್ತೆ ಹುಟ್ಟುವ ಆಸೆಯಿದೆ!

Friday, 23.03.2018, 3:05 AM       No Comments

ಸಂಸತ್ತಿನಲ್ಲಿ ಅಂದೇನಾಯಿತು?

ಅಂದು 1929ರ ಏಪ್ರಿಲ್ 8. ಭಗತ್ ಮತ್ತು ಆತನ ಸ್ನೇಹಿತ ಬಟುಕೇಶ್ವರ ದತ್ತರು ಸಂಸತ್​ನ ವೀಕ್ಷಕರ ಆಸನಗಳಲ್ಲಿ ಕುಳಿತಿದ್ದರು. ಅಧಿವೇಶನದಲ್ಲಿ ಭಾಷಣ ನಡೆಯುತ್ತಿದ್ದಂತೆಯೇ ಎದ್ದುನಿಂತ ಅವರಿಬ್ಬರೂ ಸ್ಪೀಕರ್ ಸ್ಥಾನದ ಹಿಂದಿನ ಗೋಡೆಗೆ ಗುರಿಯಿಟ್ಟು ಬಾಂಬ್ ಎಸೆದರು. ಬೃಹತ್ ಸ್ಪೋಟದಿಂದ ಗಾಬರಿಯಾಗಿ ಎಲ್ಲರೂ ಹೊರಗೋಡತೊಡಗಿದರು. ಬಾಂಬ್ ದಾಳಿಯಿಂದ ಯಾವ ಸಾವು-ನೋವೂ ಆಗಲಿಲ್ಲ; ಬ್ರಿಟಿಷರ ಗಮನ ಸೆಳೆದು ಸತ್ಯ ಅರುಹುವುದೇ ಭಗತ್, ಅವನ ಗೆಳೆಯರ ಉದ್ದೇಶವಾಗಿತ್ತು. ಹೀಗಾಗಿ, ರಿವಾಲ್ವಾರ್ ಎಸೆದು, ತಪ್ಪಿಸಿಕೊಳ್ಳುವ ಯತ್ನವನ್ನೂ ಮಾಡದೆ ‘ಇನ್ಕ್ವಿಲಾಬ್ ಜಿಂದಾಬಾದ್’ ಎಂದು ಕೂಗುತ್ತಲೇ ಸೆರೆಯಾದರು. ಅವರನ್ನು ಬಂಧಿಸಿ ಸೆಂಟ್ರಲ್ ಜೈಲಿನಲ್ಲಿರಿಸಲಾಯಿತು.

ಯುವಶಕ್ತಿಯ ಸಂಕೇತ

ನ್ಯಾಯಾಲಯದಲ್ಲಿ ಭಗತ್ ಮತ್ತು ಬಟುಕೇಶ್ವರ ದತ್ತರ ವಿಚಾರಣೆ ಆರಂಭವಾಯಿತು. ತನ್ನ ಪರ ತಾನೇ ವಾದಿಸಲು ಭಗತ್ ನಿರ್ಧರಿಸಿದ. ಅವನ ವಾದ, ವಿಚಾರಸರಣಿ ಎಲ್ಲರನ್ನೂ ನಿಬ್ಬೆರಗಾಗಿಸಿತು. ತನ್ನ ಕೃತ್ಯ ಸ್ವಾತಂತ್ರ್ಯ ಸಂಗ್ರಾಮದ ಸಂಕೇತವೆಂದೂ, ಬ್ರಿಟಿಷರ ಸಾಮ್ರಾಜ್ಯವಾದವನ್ನು ವಿರೋಧಿಸಿ ಚುನಾಯಿತರಾಗಿದ್ದ ಭಾರತೀಯ ಪ್ರತಿನಿಧಿಗಳ ಮೇಲೆ ಬ್ರಿಟಿಷರು ನಡೆಸಿದ ದಬ್ಬಾಳಿಕೆಗೆ ಪ್ರತ್ಯುತ್ತರವೆಂದೂ ಭಗತ್ ವಾದಿಸಿದ. ಅಷ್ಟು ಹೊತ್ತಿಗಾಗಲೇ ಸ್ವಾತಂತ್ರ್ಯ ಹೋರಾಟದ ಕಿಡಿ ದೇಶದೆಲ್ಲೆಡೆ ವ್ಯಾಪಿಸಿ, ಭಗತ್​ನ ಗುಣಗಾನ ನಡೆಯುತ್ತಿತ್ತು. ಭಗತ್, ಅವನ ಸ್ನೇಹಿತರು ಯುವಶಕ್ತಿಯ, ಸ್ವಾತಂತ್ರ್ಯ ಸಂಗ್ರಾಮದ ಹೊಸ ಸಂಕೇತವಾಗಿದ್ದರು. ಅದೇ ವೇಳೆಗೆ, ಭಗತ್​ನ ಸಂಘಟನೆಯ ಸಹಚರರನ್ನು ಲಾಹೋರ್​ನಲ್ಲಿ ಬಂಧಿಸಿ, ಸ್ಯಾಂಡರ್ಸ್ ಕೊಲೆ ಹಾಗೂ ಕಾನೂನುವಿರೋಧಿ ಕಾರ್ಯಾಚರಣೆಯ ಆಪಾದನೆ ಹೊರಿಸಲಾಗಿತ್ತು. ಇತ್ತ ನ್ಯಾಯಾಲಯದಲ್ಲಿ ಭಗತ್​ನ ವಾದಗಳೆಲ್ಲ ತಿರಸ್ಕೃತಗೊಂಡು, ಭಗತ್, ರಾಜಗುರು ಮತ್ತು ಸುಖದೇವ್​ರನ್ನು 1931ರ ಮಾರ್ಚ್ 23ರಂದು ಗಲ್ಲಿಗೇರಿಸಬೇಕೆಂಬ ತೀರ್ಪಬಂತು. ಸಂಗಡಿಗರ ಜತೆ ನೇಣುಗಂಬವೇರಿದ ಭಗತ್ ಲಕ್ಷಾಂತರ ಯುವಕರು ತಾಯಿನಾಡಿನ ಮುಕ್ತಿಗಾಗಿ ಹೋರಾಡಲು ಪ್ರೇರಣೆಯಾದ. ಎಂದೂ ಆರದ ದೇಶಭಕ್ತಿಯ ಕಿಡಿಯನ್ನು ಹೊತ್ತಿಸಿದ.

ಗಲ್ಲಿಗೇರುವ ಹಿಂದಿನ ದಿನ

1931ರ ಮಾರ್ಚ್ 22 ಅಂದರೆ ಗಲ್ಲಿಗೇರುವ ಹಿಂದಿನ ದಿನ ಭಗತ್ ಸಿಂಗ್ ಪರ ವಕೀಲ ಪ್ರಾಣ್​ನಾಥ್ ಮೆಹ್ತಾ, ಭಗತ್​ನನ್ನು ಕೊನೆಯದಾಗಿ ಭೇಟಿಯಾದ ಸಂದರ್ಭ. ಮೆಹ್ತಾರನ್ನು ಕಾಣುತ್ತಿದ್ದಂತೆ ಭಗತ್ ಮಂದಹಾಸ ದೊಂದಿಗೆ ನಮಸ್ಕರಿಸುತ್ತಾ, ‘ನಾನು ಹೇಳಿದ್ದ ‘ದಿ ರೆವಲೂಷನರಿ ಲೆನಿನ್’ ಪುಸ್ತಕ ತಂದಿದ್ದೀರಾ?’ ಎಂದು ಕೇಳಿದ. ಪುಸ್ತಕ ಕೈಗೆ ಬರುತ್ತಿದ್ದಂತೆ ಧನ್ಯವಾದ ಹೇಳಿ ಉಲ್ಲಾಸದಿಂದ ಪುಸ್ತಕ ಓದಲು ಶುರುಮಾಡಿಯೇಬಿಟ್ಟ! ನಾಳೆ ಗಲ್ಲಿಗೇರುವ ವ್ಯಕ್ತಿ ಹೀಗೆ ಇರಲು ಸಾಧ್ಯವೇ? ಎಂದು ರೋಮಾಂಚನಗೊಂಡ ಮೆಹ್ತಾ, ‘ದೇಶಕ್ಕೆ ಏನಾದರೂ ಸಂದೇಶ ನೀಡುತ್ತೀರಾ?’ ಎಂದಾಗ ಭಗತ್ ಸಿಂಗ್ ಪುಸ್ತಕದಿಂದ ತಲೆಯೆತ್ತದೆ ‘ಸಾಮ್ರಾಜ್ಯಷಾಹಿಗೆ ಧಿಕ್ಕಾರ, ಕ್ರಾಂತಿ ಚಿರಾಯುವಾಗಲಿ- ಈ ಎರಡು ಘೊಷಣೆಗಳನ್ನು ತಿಳಿಸಿ’ ಎಂದ. ‘ನಿನಗೇನಾದರೂ ಆಸೆ ಇದೆಯಾ?’ ಎಂಬ ಮೆಹ್ತಾರ ಪ್ರಶ್ನೆಗೆ, ‘ಹೌದು, ಈ ದೇಶದಲ್ಲಿ ಮತ್ತೆ ಹುಟ್ಟುವ ಆಸೆಯಿದೆ; ಮತ್ತೆ ಹುಟ್ಟಿದರೆ ಈ ದೇಶದ ಸೇವೆಮಾಡಬಹುದು’ ಎಂದುತ್ತರಿಸಿದ! ಗಲ್ಲಿಗೇರುವ ದಿನವೂ, ನೇಣುಗಂಬದ ಹಾದಿಯಲ್ಲಿ ಭಗತ್ ಸಿಂಗ್ ಗಟ್ಟಿಯಾಗಿ ಕ್ರಾಂತಿ ಕುರಿತಾದ ಭಾಷಣವೊಂದನ್ನು ಮಾಡಿದ. ಉಳಿದ ಕೈದಿಗಳು ರೋಮಾಂಚನಗೊಂಡರು. ‘ಸರ್ಫ್​ರೋಷ್ ಕಿ ತಮನ್ನಾ ….’, ‘ರಂಗ್ ದೇ ಬಸಂತಿ ಚೋಲಾ….’ ಹಾಡುಗಳು ಪ್ರತಿಧ್ವನಿಸಿದವು. ಇಡೀ ಬಂದೀಖಾನೆಯು ‘ಇಂಕ್ವಿಲಾಬ್ ಜಿಂದಾಬಾದ್’, ‘ಹಿಂದುಸ್ತಾನ್ ಆಜಾದ್ ಹೋ’ ಘೊಷಣೆಗಳಿಂದ ತುಂಬಿಹೋಯಿತು. ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಈ ಮೂವರ ಮುಖದಲ್ಲೂ ಉತ್ಸಾಹ ಮತ್ತು ನಗು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚು ಹೊತ್ತಿಸಬಲ್ಲ, ಸ್ಪೂರ್ತಿ ತುಂಬಬಲ್ಲ ಅವರ ವರ್ತನೆಗೆ ಜೈಲಿನ ಅಷ್ಟೂ ಅಧಿಕಾರಿಗಳು ಬೆಚ್ಚಿಬಿದ್ದಿದ್ದರು. ನೇಣಿಗೆ ಕೊರಳೊಡ್ಡುವ ಮುನ್ನವೂ ಆ ಮೂವರ ಮುಖಗಳಿಂದ ನಗು ಮಾಸಿರಲಿಲ್ಲ…

Leave a Reply

Your email address will not be published. Required fields are marked *

Back To Top