ಕುಲಗಾಂನಲ್ಲಿ ಎನ್​ಕೌಂಟರ್​: ಮೂವರು ಉಗ್ರರು ಬಲಿ, ಹಿರಿಯ ಪೊಲೀಸ್​ ಅಧಿಕಾರಿ ಹುತಾತ್ಮ

ಶ್ರೀನಗರ: ಕುಲ​ಗಾಂನಲ್ಲಿ ಭದ್ರತಾಪಡೆ ಮತ್ತು ಉಗ್ರರ ನಡುವೆ ನಡೆದ ಎನ್​ಕೌಂಟರ್​ನಲ್ಲಿ ಜೈಷ್-ಎ-ಮೊಹಮ್ಮದ್ ಸಂಘಟನೆಯ ಮೂವರು ಉಗ್ರರು ಬಲಿಯಾಗಿದ್ದಾರೆ. ಹಾಗೇ ಡಿಎಸ್​ಪಿ ಶ್ರೇಣಿಯ ಪೊಲೀಸ್​ ಅಧಿಕಾರಿಯೋರ್ವರು ಹುತಾತ್ಮರಾಗಿದ್ದಾರೆ.

ಶ್ರೀನಗರದಿಂದ 68 ಕಿಮೀ ದೂರದ ಕುಲಗಾಂನಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಬಿಎಸ್​ಎಫ್​, ಸಿಆರ್​ಪಿಎಫ್​ ಮತ್ತು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಉಗ್ರರು ಭದ್ರತಾ ಪಡೆಯ ಮೇಲೆ ಒಮ್ಮೆಲೇ ಗುಂಡಿನ ದಾಳಿ ನಡೆಸಲು ಶುರು ಮಾಡಿದ್ದರಿಂದ ಅವರನ್ನು ಎನ್​ಕೌಂಟರ್​ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹುತಾತ್ಮರಾಗಿರುವ ಅಧಿಕಾರಿ ಅರುಣ್​ ಕುಮಾರ್​ ಎರಡು ವರ್ಷಗಳಿಂದ ಕುಲಗಾಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಘಟನೆ ವೇಳೆ ಬಿಎಸ್​ಎಫ್​ನ ಇಬ್ಬರು ಯೋಧರು, ಓರ್ವ ಪೇದೆ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪ್ರಚೋದಿತ ದಾಳಿ
ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನ ಪುಂಡಾಟ ಮೆರೆಯುತ್ತಿದೆ. ಜನವಸತಿ ಪ್ರದೇಶದತ್ತ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ. ಮತ್ತೆಮತ್ತೆ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ.