ಮದುವೆಯಾಗುವುದಾಗಿ ಹೇಳಿ ಅತ್ಯಾಚಾರ: ದೂರು ನೀಡಿದ ವೈದ್ಯೆ

ಬೆಂಗಳೂರು: ಮದುವೆಯಾಗುವುದಾಗಿ ಹೇಳಿ ವೈದ್ಯೆ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿ ವಿರುದ್ಧ ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಮಮೂರ್ತಿ ಎಂಬಾತ ವೈದ್ಯೆಗೆ ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದ. ನಂತರ ಮೊದಲ ಬಾರಿಗೆ ಫೋರಂ ಮಾಲ್​ನಲ್ಲಿ ಇಬ್ಬರೂ ಭೇಟಿಯಾಗಿದ್ದರು. ಈ ವೇಳೆ ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ್ದ. ಅಲ್ಲದೆ, ತಾನು ಆರೋಗ್ಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದೇನೆ. ನಿಮ್ಮ ಕಡೆಯವರಿಗೆ ಯಾರಿಗಾದರೂ ಕೆಲಸ ಬೇಕಿದ್ದರೆ ಹೇಳಿ ಎಂದೂ ವೈದ್ಯೆಗೆ ತಿಳಿಸಿದ್ದ ಎನ್ನಲಾಗಿದೆ.

ಅದನ್ನು ನಂಬಿದ ವೈದ್ಯೆ ಸಂಬಂಧಿಕರಿಂದ 22 ಲಕ್ಷ ರೂಪಾಯಿ ಕೊಡಿಸಿದ್ದರು. ಹಾಗೇ ತಾವೂ ಕೂಡ 4 ಲಕ್ಷ ರೂಪಾಯಿ ನೀಡಿದ್ದರು. ಅಲ್ಲದೆ, ನಂಬಿಸಿ ಒತ್ತಾಯಪೂರ್ವಕವಾಗಿ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದ. ನ.22ರಂದು ಶೇಷಾದ್ರಿಪುರಂ ರಿಜಿಸ್ಟರ್​ ಆಫೀಸ್​ನಲ್ಲಿ ಮದುವೆಯಾಗಲು ದಿನಾಂಕ ನಿಗದಿಪಡಿಸಿದ್ದರು. ಅಲ್ಲದೆ, ನ.20ರಂದು ಹೋಟೆಲ್​ವೊಂದರಲ್ಲಿ ಇವರಿಬ್ಬರೂ ಭೇಟಿಯಾಗಿದ್ದರು. ಆದರೆ, ರಾಮಮೂರ್ತಿ ಮದುವೆದಿನ ರಿಜಿಸ್ಟರ್​ ಆಫೀಸ್​ಗೆ ಬಾರದೆ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಹಣವನ್ನೂ ವಾಪಸ್​ ಕೊಟ್ಟಿಲ್ಲ. ಕೆಲಸವನ್ನೂ ಕೊಡಿಸಿಲ್ಲ ಎಂದು ವೈದ್ಯೆ ದೂರಿನಲ್ಲಿ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *