ವಿಶ್ವದಾಖಲೆ ಪಟ್ಟಿ ಸೇರಿದ ಮದುವೆ ಆಮಂತ್ರಣ

ಅಕ್ಕಿಆಲೂರ: ಪಟ್ಟಣದ ಕುಮಾರ ನಗರದ ನಿವಾಸಿ ಪೊಲೀಸ್ ಪೇದೆ ಕರಬಸಪ್ಪ- ವಿನುತಾ ಗೊಂದಿಯವರ ಮದುವೆ ಆಮಂತ್ರಣವನ್ನು ಇನ್​ಕ್ರೆಡೆಬಲ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯು ಸಾಂಪ್ರದಾಯಿಕ, ಸಾಂಸ್ಕೃತಿಕ ಮತ್ತು ಮೌಲ್ಯಯುತ ಪತ್ರಿಕೆ ಎಂದು ಪರಿಗಣಿಸಿ ವಿಶ್ವದಾಖಲೆ ಪಟ್ಟಿಗೆ ಸೇರ್ಪಡೆ ಮಾಡಿದೆ.

ಕರಬಸಪ್ಪ ಅವರು ನೇತ್ರ, ರಕ್ತ ಮತ್ತು ದೇಹದಾನ ಜಾಗೃತಿಯಲ್ಲಿ ಹಾವೇರಿ ಸೇರಿ ಉತ್ತರ ಕರ್ನಾಟಕದಲ್ಲಿ ವಿಶೇಷ ಛಾಪು ಮೂಡಿಸಿದ್ದಾರೆ. 2014ರಲ್ಲಿ ವಿನುತಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಸ್ವತಃ ಕೈ ಅಕ್ಷರದಲ್ಲಿ ರಚಿಸಿದ್ದ ಕರಬಸಪ್ಪ, ಸಪ್ತಪದಿ, ಮಾಂಗಲ್ಯ ಧಾರಣೆ, ಅಕ್ಷತೆ ಹಾಕುವುದು, ಕನ್ಯಾದಾನ, ಕಂಕಣ ಧಾರಣೆಗಳ ಮಹತ್ವದ ಜತೆಗೆ ಸನಾತನ ಹಿಂದು ಧರ್ಮದ ಮದುವೆಯ ಸಾಂಸ್ಕೃತಿಕ, ಸಂಪ್ರದಾಯ ವಿಧಿವಿಧಾನಗಳ ಹಿಂದೆ ಇರುವ ವೈಜ್ಞಾನಿಕ ವಿವರಣೆಗಳನ್ನೂ ನೀಡಿ ಒಟ್ಟು 8 ಪುಟದ ಆಮಂತ್ರಣ ರಚಿಸಿದ್ದರು. ಅಷ್ಟೇ ಅಲ್ಲದೆ, ಮದುವೆ ದಿನ ಕರಬಸಪ್ಪ ಮತ್ತು ವಿನುತಾ ದಂಪತಿ ನೇತ್ರದಾನ ಒಪ್ಪಿಗೆ ಪತ್ರ ಸಹ ಬರೆದುಕೊಟ್ಟಿದ್ದರು.

ಕರಬಸಪ್ಪ ಪ್ರತಿ ತಿಂಗಳು ತಮ್ಮ ವೇತನದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ ಏರ್ಪಡಿಸುತ್ತಾರೆ. ಇದುವರೆಗೆ 13 ಬಾರಿ ರಕ್ತದಾನ ಮಾಡಿದ್ದಾರೆ. ಅಕ್ಕಿಆಲೂರ ಹಾಗೂ ಸುತ್ತಲಿನ ಭಾಗದಲ್ಲಿ ನಿಧನರಾದ 20 ಜನರ ಕಣ್ಣುಗಳನ್ನು ದಾನವಾಗಿ ಪಡೆದು ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಅವರ ವಿಶಿಷ್ಟ ಮದುವೆ ಆಮಂತ್ರಣ ಈಗ ವಿಶ್ವದಾಖಲೆಗೆ ಸೇರ್ಪಡೆಯಾಗಿರುವುದು ಎಲ್ಲರ ಸಂತಸಕ್ಕೆ ಕಾರಣವಾಗಿದೆ.

ಮ್ಮ ಇಲಾಖೆಯಲ್ಲಿರುವ ಪ್ರತಿಯೊಬ್ಬರೂ ಒತ್ತಡದಲ್ಲಿ ಜೀವಿಸುತ್ತಾರೆ. ಸಮರ್ಥ ಕಾರ್ಯ ನಿರ್ವಹಿಸಿ ಕರಬಸಪ್ಪ ಗೊಂದಿ ಸದಾ ನೇತ್ರದಾನ, ರಕ್ತದಾನ ಜಾಗೃತಿಯಂತಹ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದನ್ನು ಇಲಾಖೆಯೇ ಹೆಮ್ಮೆ ಪಡುವಂತೆ ಮಾಡಿದೆ. ಅವರ ಮದುವೆ ಆಮಂತ್ರಣ ವಿಶ್ವ ದಾಖಲೆ ಪಟ್ಟಿಗೆ ಸೇರ್ಪಡೆಯಾಗಿರುವುದು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರಿಗೆ ಆದರ್ಶ.

| ಪರಶುರಾಮ, ಎಸ್​ಪಿ, ಹಾವೇರಿ