ತಾಳಿಕಟ್ಟುವ ವೇಳೆ ಮುರಿದು ಬಿದ್ದ ಮದುವೆ

ಸುಬ್ರಹ್ಮಣ್ಯ: ಇನ್ನೇನು ತಾಳಿ ಕಟ್ಟುವ ಶಾಸ್ತ್ರ ಮಾತ್ರ ಉಳಿದಿತ್ತು.ಆ ವೇಳೆ ತಮ್ಮಿಬ್ಬರ ಜಾತಿ ಬೇರೆ ಬೇರೆ ಎಂದು ತಿಳಿದ ವಧು ಮತ್ತು ವರರು ಮದುವೆಯಾಗಲು ನಿರಾಕರಿಸಿದ್ದು, ಬಳಿಕ ಪೋಲಿಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದುಕೊಟ್ಟ ಪ್ರಸಂಗ ಸುಳ್ಯ ತಾಲೂಕಿನ ಹರಿಹರಪಳ್ಳತಡ್ಕದಲ್ಲಿ ನಡೆದಿದೆ.

ಪಿರಿಯಾಪಟ್ಟಣ ಮೂಲದ ವರ ಮತ್ತು ಉಪ್ಪಿನಂಗಡಿ ಹಿರೇಬಂಡಾಡಿಯ ವಧುವಿಗೆ ಸುಳ್ಯ ತಾಲೂಕಿನ ಹರಿಹರಪಲ್ಲತ್ತಡ್ಕದ ಶ್ರೀಹರಿಹರೇಶ್ವರ ಸಭಾಭವನದಲ್ಲಿ ಮದುವೆ ನಿಗದಿಪಡಿಸಲಾಗಿತ್ತು.
ಪಿರಿಯಾಪಟ್ಟಣದ ಯುವಕ ಉಪ್ಪಿನಂಗಡಿಯ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದಾಗ ಅಲ್ಲಿ ಸಿಕ್ಕಿದ ಮದುವೆ ಬ್ರೋಕರ್ ಒಬ್ಬರಲ್ಲಿ ನನಗೆ ವಧುವಿದ್ದರೆ ನೋಡುವಂತೆ ತಿಳಿಸಿದ್ದರು. ಆಗ ದಳ್ಳಾಳಿ ಅದೇ ಮದುವೆಗೆ ಬಂದಿದ್ದ ಯುವತಿಯೊಬ್ಬರನ್ನು ತೋರಿಸಿದ್ದರು. ಬಳಿಕ ಹಿರಿಯರ ಸಮಕ್ಷಮದಲ್ಲಿ ಮಾತುಕತೆ ನಡೆದು, ಮದುವೆ ದಿನವೂ ನಿಗದಿಯಾಯಿತು.

ಮದುವೆಯ ವಿಧಿವಿಧಾನಗಳು ಆರಂಭವಾಗಿ ಧಾರಾ ಮುಹೂರ್ತ ಮಾತ್ರ ಬಾಕಿಯಿತ್ತು. ಈ ಸಂದರ್ಭ ಮದುವೆ ಧಾರ್ಮಿಕ ವಿಧಿ ವಿಧಾನಗಳು ಬೇರೆ ಬೇರೆಯಾಗಿದ್ದುದು ಗಮನಕ್ಕೆ ಬಂದಿದೆ. ಈ ಬಗ್ಗೆ ಎರಡೂ ಕಡೆಯವರು ಮಾಹಿತಿ ಪಡೆದಾಗ ವಧು-ವರರು ಬೇರೆ ಬೇರೆ ಜಾತಿಯವರು ಎಂದು ಗೊತ್ತಾಗಿದೆ.

ಬಳಿಕ ಎರಡು ಕಡೆಯ ಹಿರಿಯರು ಮಾತುಕತೆ ನಡೆಸಿ ಮದುವೆ ಕಾರ್ಯಕ್ರಮ ಸ್ಥಗಿತಗೊಳಿಸಿದರು. ಇದಕ್ಕೆ ವಧು-ವರರೂ ಸಮ್ಮತಿ ಸೂಚಿಸಿದರು. ವಿಷಯ ತಿಳಿದ ಹರಿಹರೇಶ್ವರ ದೇವಳದ ಮ್ಯಾನೇಜರ್ ಲೋಕನಾಥ ಕಿರಿಭಾಗ ಅವರು ಸುಬ್ರಹ್ಮಣ್ಯ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಪೋಲಿಸರು ವಧು-ವರ ಹಾಗೂ ಇಬ್ಬರ ಮನೆಯವರನ್ನು ಠಾಣೆಗೆ ಕರೆಯಿಸಿ ಮಾತುಕತೆ ನಡೆಸಿದರು. ಘಟನೆಗೆ ಸಂಬಂಧಿಸಿ ಉಭಯ ಕಡೆಯವರಿಂದ ಮುಚ್ಚಳಿಕೆ ಬರೆಯಿಸಿ ಕಳುಹಿಸಿಕೊಟ್ಟರು. ಸಭಾಭವನದ ಬಾಡಿಗೆ, ಊಟೋಪಚಾರದ ಬಿಲ್‌ಅನ್ನು ಎರಡು ಕಡೆಯವರು ಸೇರಿ ಪಾವತಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *