ಭಾರತದ ಬ್ಯಾಂಕ್​ಗಳಿಗೆ ಮಾರುಕಟ್ಟೆ ಪೆಟ್ಟು

ನವದೆಹಲಿ: ದೇಶದ ಅರ್ಥವ್ಯವಸ್ಥೆಯನ್ನೇ ತಳಮಳಗೊಳಿಸಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್​ಬಿ) ದೋಖಾ ಹಗರಣದಿಂದಾಗಿ ಭಾರತದ ಬ್ಯಾಂಕಿಂಗ್ ವಲಯದಲ್ಲಿ ‘ನೀರವ’ ಮೌನ ಕವಿದಿದೆ. ಒಟ್ಟಾರೆ ಬ್ಯಾಂಕ್​ಗಳಿಗೆ 69,750 ಕೋಟಿ ರೂ. ಮಾರುಕಟ್ಟೆ ಬಂಡವಾಳ ನಷ್ಟವಾಗಿದೆ.

ಪಿಎನ್​ಬಿ ತನ್ನ ಸಾಲದ ಮೊತ್ತ ಬಹಿರಂಗಪಡಿಸಿದ ಬಳಿಕ ವಿವಿಧ ಬ್ಯಾಂಕ್​ಗಳು ಋಣಪತ್ರದಲ್ಲಿನ ತಮ್ಮ ಪಾಲನ್ನು ಹೊರಹಾಕುತ್ತಿವೆ. ಅಲಹಾಬಾದ್ ಬ್ಯಾಂಕ್ 2000 ಕೋಟಿ ರೂ. ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ 1360 ಕೋಟಿ ರೂ.ಗಳನ್ನು ಉದ್ಯಮಿ ನೀರವ್ ಮೋದಿಗೆ ಪಿಎನ್​ಬಿ ನೀಡಿರುವ ಋಣಪತ್ರದಲ್ಲಿ ಪಾಲು ಹೊಂದಿರುವುದು ಬಹಿರಂಗವಾಗಿದೆ. ಹಗರಣ ಬೆಳಕಿಗೆ ಬಂದಾಗಿನಿಂದ ಪಿಎನ್​ಬಿ ಷೇರುಗಳ ಮೌಲ್ಯ ಶೇ. 28 ಕುಸಿದಿದೆ. ಅಂದಾಜು 10,976 ಕೋಟಿ ರೂ. ಮಾರುಕಟ್ಟೆ ಬಂಡವಾಳವನ್ನು ಮೀರಿ ಸಾಲದ ಸುಳಿಯಲ್ಲಿ ಪಿಎನ್​ಬಿ ಮುಳುಗಿದೆ. ಇದೆಲ್ಲದರಿಂದಾಗಿ ಭಾರತೀಯ ಬ್ಯಾಂಕ್​ಗಳ ಮಾರುಕಟ್ಟೆ ಬಂಡವಾಳಕ್ಕೆ ಭಾರಿ ಪೆಟ್ಟು ಬಿದ್ದಿರುವುದನ್ನು ಹಣಕಾಸು ಹೂಡಿಕೆ ಖಾಸಗಿ ಕಂಪನಿಯೊಂದು ಬಹಿರಂಗಪಡಿಸಿದೆ. ಅನುತ್ಪಾದಕ ಆಸ್ತಿಗಳ ಹೊಡೆತಕ್ಕೆ ತತ್ತರಿಸಿರುವ ಬ್ಯಾಂಕ್​ಗಳ ತ್ರೖೆಮಾಸಿಕ ಲಾಭದ ಮೇಲೆಯೂ ಈ ಹಗರಣ ತೀವ್ರ ಪರಿಣಾಮ ಬೀರಲಿದೆ ಎಂದು ಸಂಸ್ಥೆ ಎಚ್ಚರಿಸಿದೆ. ಸಾರ್ವಜನಿಕ ವಲಯದ ಬ್ಯಾಂಕ್​ಗಳಲ್ಲಿಯೂ ಖಾಸಗಿ ಬ್ಯಾಂಕ್​ಗಳಲ್ಲಿರುವಂತೆ ಕೇಂದ್ರೀಕೃತ ವ್ಯವಸ್ಥೆ ಜಾರಿಮಾಡುವ ಅನಿವಾರ್ಯತೆ ಇದೆ ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಾರ್ವಜನಿಕ ವಲಯ ಬ್ಯಾಂಕ್ ಸೂಚ್ಯಂಕದಲ್ಲಿ ಶೇ. 10.4 ಕುಸಿತ ದಾಖಲಾಗಿದ್ದು, ಹಗರಣ ಬಹಿರಂಗಗೊಂಡ ಅವಧಿಯಲ್ಲಿ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ ಶೇ. 1.5 ಇಳಿಕೆಯಾಗಿದೆ.

Leave a Reply

Your email address will not be published. Required fields are marked *