ಸಂತೆ ಮಾರುಕಟ್ಟೆ ಅಭಿವೃದ್ಧಿ ಅವೈಜ್ಞಾನಿಕ

ಬ್ಯಾಡಗಿ: ಪಟ್ಟಣದ ಸಂತೆ ಮಾರುಕಟ್ಟೆ ಮೇಲ್ಚಾವಣಿ ಸೇರಿ ಕಟ್ಟೆಗಳನ್ನು ಅವೈಜ್ಞಾನಿಕವಾಗಿ ನಿರ್ವಿುಸಿದ ಪರಿಣಾಮ ಆವರಣ ಗಬ್ಬು ನಾರುತ್ತಿದ್ದು, ಸಾರ್ವಜನಿಕರು ಕೊಳಚೆಯಲ್ಲಿ ಸಂಚರಿಸಬೇಕಾಗಿದೆ.
ಪಟ್ಟಣದ ಹನುಮನ ಹೊಂಡದಲ್ಲಿರುವ ಸಂತೆ ಮೈದಾನ ಅಭಿವೃದ್ಧಿ ಕಾಮಗಾರಿ ಕಂಡು ಜನರಲ್ಲಿ ಸಂತಸ ಮೂಡಿತ್ತು. ಆದರೆ, ಈಗ ನೋಡಿದರೆ, ಸಂತೆ ಜಾಗ ಇನ್ನಷ್ಟು ಇಕ್ಕಟ್ಟಾಗಿದ್ದು, ಕಾಲಿಡಲಾಗದಷ್ಟು ಗಿಜಿಗಿಜಿ ಎನ್ನುತ್ತಿದೆ. ಮೇಲ್ಚಾವಣಿ ನೀರು ಹೊರ ಹೋಗದೆ, ವರ್ತಕರು ಕೊಳಚೆಯಲ್ಲೇ ಕುಳಿತು ವ್ಯಾಪಾರ ನಡೆಸಬೇಕಿದೆ. ವರ್ಷದ ಹಿಂದೆ ಎಸ್​ಎಫ್​ಸಿ ವಿಶೇಷ ಅನುದಾನದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿದ ಸಂತೆ ಮಾರುಕಟ್ಟೆ ಇದ್ದೂ ಇಲ್ಲದಂತಾಗಿವೆ. ಆದರೆ, ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಸಂತೆ ಪ್ರವೇಶಿಸಲು ನಿರ್ವಿುಸಿದ ಮೆಟ್ಟಿಲುಗಳ ಹಾಗೂ ಮೇಲ್ಚಾವಣಿಯ ನೀರು ಹೊರಹೋಗಲು ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಮಳೆಯ ನೀರು ವಾರಗಟ್ಟಲೇ ನಿಂತಲ್ಲೆ ನಿಲ್ಲುತ್ತಿದೆ.
ಅವೈಜ್ಞಾನಿಕ ಯೋಜನೆ: 2 ಕೋಟಿ ರೂ. ಖರ್ಚು ಮಾಡಿದರೂ ಪ್ರಯೋಜನವಿಲ್ಲದಂತಾಗಿದೆ. ಸಂತೆ ಮಾಡಲು ಜನರಿಗೆ ಅಚ್ಚುಕಟ್ಟಾದ ಜಾಗ ಇಲ್ಲದಾಗಿದೆ. ವರ್ತಕರಿಗೆ ಸಂತೆ ಸಾಮಾನು ಸಾಗಿಸಲು ಆಗುತ್ತಿಲ್ಲ. ಮಳಿಗೆಗಳ ನಿರ್ಮಾಣ ಅಪೂರ್ಣವಾಗಿವೆ. ಕಟ್ಟಡಗಳಿಂದ ಬಿದ್ದ ನೀರು ಹರಿದು ಹೋಗಲು ಒಳಚರಂಡಿ ವ್ಯವಸ್ಥೆಯಿಲ್ಲ. ಇಂತಹ ಅನಾರೋಗ್ಯಕರ ವಾತಾವರಣವಿದ್ದಲ್ಲಿ ವ್ಯಾಪಾರಸ್ಥರು, ಸಾರ್ವಜನಿಕರ ಗತಿಯೇನು?
ಮೀನು ಮಾರಾಟ ಮಾಡಲು ಬೇರೆ ಜಾಗ ನೀಡಿಲ್ಲ. ಹೀಗಾಗಿ ಸಂತೆಯಲ್ಲಿ ಜನ ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ. 2 ಕೋಟಿ ರೂ. ಅನುದಾನದಲ್ಲಿ ಮೇಲ್ಚಾವಣಿ ಅಳವಡಿಕೆ ಬಿಟ್ಟರೆ, ಯಾವ ಅಭಿವೃದ್ಧಿಯೂ ನಡೆದಿಲ್ಲವೆಂಬ ಆರೋಪವಿದೆ. ಸಂಜೆಯಾಗುತ್ತಿದ್ದಂತೆ ಸಂತೆ ಕಟ್ಟೆಯ ಮೇಲೆ ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿವೆ. ಮೂರು ಕಡೆಗಳಲ್ಲೂ ಗೇಟ್ ಅಳವಡಿಸುವ ಬೇಡಿಕೆಗೆ ಸಂಬಂಧಿಸಿದವರು ಸ್ಪಂದಿಸಿಲ್ಲ.
ವರ್ತಕರ ಆಕ್ರೋಶ: ಪುರಸಭೆ ವತಿಯಿಂದ ವಾರಕ್ಕೊಮ್ಮೆ ತರಕಾರಿ, ಸೊಪ್ಪು, ಬುಟ್ಟಿಯ ಹಣ್ಣು ಮಾರಾಟಗಾರರಿಂದ ಕನಿಷ್ಠ 20 ರಿಂದ 100 ರೂ. ವಸೂಲಿ ಮಾಡಲಾಗುತ್ತಿದೆ. ಆದರೆ, ವ್ಯಾಪಾರಸ್ಥರ ಹಾಗೂ ಸಾರ್ವಜನಿಕರ ಸಮಸ್ಯೆಗೆ ಯಾರೂ ಸ್ಪಂದಿಸುತ್ತಿಲ್ಲ. ಕೆಲ ವರ್ತಕರು ಸಂತೆಕಟ್ಟೆಯಲ್ಲಿ ಅನುಕೂಲಕ್ಕೆ ತಕ್ಕಷ್ಟು ಜಾಗ ಪಡೆದುಕೊಂಡಿದ್ದಾರೆ. ಯಾವ ನೀತಿಗಳನ್ನೂ ಇಲ್ಲಿ ಪಾಲಿಸದೆ, ಸಣ್ಣ ವ್ಯಾಪಾರಸ್ಥರ ಜೀವ ಹಿಂಡಲಾಗುತ್ತಿದೆ. ದೂರು ಸಲ್ಲಿಸಲು ತೆರಳಿದರೆ, ಜಾಗ ನೀಡಲು ಸಮಸ್ಯೆ ಮಾಡುತ್ತಾರೆ ಎಂದು ವ್ಯಾಪಾರಸ್ಥ ನಾಗಪ್ಪ ಕದರಮಂಡಲಗಿ ಆಕ್ರೋಶ ವ್ಯಕ್ತಪಡಿಸಿದರು.
ಎರಡು ಕೋಟಿ ರೂ. ವೆಚ್ಚದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಸಂತೆ ಮೈದಾನ ಅಭಿವೃದ್ಧಿ ಕಂಡಿದೆ. ಆದರೆ, ಮಳೆ ನೀರು ಹೊರ ಹೋಗಲು ಒಳಚರಂಡಿ ಸಮಸ್ಯೆ ಉದ್ಭವಿಸಿದ್ದು, ಮೀನು ಮಾರುಕಟ್ಟೆಗೆ ಪ್ರತ್ಯೇಕ ಜಾಗ ಒದಗಿಸಬೇಕೆಂಬ ಬೇಡಿಕೆ ಸಾರ್ವಜನಿಕರಿಂದ ಬಂದಿದೆ. ಒಂದೆರಡು ಸಂತೆ ಕಟ್ಟೆಗಳನ್ನು ರೈತರಿಗೆ ಮೀಸಲಿಡಲು ಚಿಂತನೆ ನಡೆದಿದೆ.
| ನಿರ್ಮಲಾ ನಾಯಕ ಪುರಸಭೆ ಇಂಜಿನಿಯರ್