ಕಾಂಗ್ರೆಸ್ ಪಾಲಾದ ಮರಿಯಮ್ಮನಹಳ್ಳಿ

ಮರಿಯಮ್ಮನಹಳ್ಳಿ : ಪಪಂ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲುವಾಗಿದ್ದು, ವಿಷ್ಣುನಾಯ್ಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ವಿಷ್ಣುನಾಯ್ಕ ಹಾಗೂ ಬಿಜೆಪಿ ಅಭ್ಯರ್ಥಿ ಹುಲಿಗಿಬಾಯಿ ರುದ್ರನಾಯ್ಕ ನಾಮ ಪತ್ರ ಸಲ್ಲಿಸಿದ್ದರು. 18 ಸದಸ್ಯರ ಪೈಕಿ 4 ಮಂದಿ ಗೈರಾಗಿದ್ದರು. ಶಾಸಕ ಭೀಮನಾಯ್ಕ ಸೇರಿ 10 ಮಂದಿ ವಿಷ್ಣುನಾಯ್ಕ ಪರ ಕೈ ಎತ್ತಿ ಬಲ ಪ್ರದರ್ಶಿಸಿದರು. ಬಿಜೆಪಿಯ 5 ಸದಸ್ಯರು ಹುಲಿಗಿ ಬಾಯಿ ಪರ ಕೈ ಎತ್ತಿದರು. ವಿಷ್ಣುನಾಯ್ಕರ ಆಯ್ಕೆಯನ್ನು ಚುನಾವಣಾಧಿಕಾರಿ ಎಚ್.ವಿಶ್ವನಾಥ ಘೋಷಿಸಿದರು. ನಂತರ ವಿಷ್ಣುನಾಯ್ಕರಿಗೆ ಅಧಿಕಾರ ಹಸ್ತಾಂತರಿಸಿಲಾಯಿತು. ಪಪಂ ಮುಖ್ಯಾಧಿಕಾರಿ ಮದಗಾರ್ ಬಸವರಾಜ್, ಉಪಾಧ್ಯಕ್ಷ ಬಂಗಾರಿ ಮಂಜುನಾಥ ಇತರರಿದ್ದರು.

ಗಲಾಟೆ: ಮಾಜಿ ಅಧ್ಯಕ್ಷೆ ಕೆ.ಎಚ್.ರೇಣುಕಾ ನಾಯ್ಕರು ಪಕ್ಷೇತರ ಅಭ್ಯರ್ಥಿ ಅಕಾರಿ ಮಹೇಶ್ ಕಾಂಗ್ರೆಸ್ ಬೆಂಬಲಿಸಿದ್ದನ್ನು ಪ್ರಶ್ನಿಸಿ ಬಿಜೆಪಿಯ ಕೆಲವರು ಅವರಿಬ್ಬರ ವಿರುದ್ಧ ಹರಿಹಾಯ್ದರು. 2016ರಲ್ಲಿ ಪಪಂ ನೂತನ ಆಡಳಿತ ರಚನೆಯಾಗುವ ಸಂದರ್ಭ ಬಿಜೆಪಿಯೊಂದಿಗೆ 30 ತಿಂಗಳು ಇರುವುದಾಗಿ ಹೇಳಿ, ಈಗ 10 ತಿಂಗಳು ಬಾಕಿ ಇರುವಾಗಲೆ ಕಾಂಗ್ರೆಸ್ ಪರ ಮತ ಚಲಾಯಿಸುವುದು ನಂಬಿಕೆ ದ್ರೋಹ ಎಂದು ತರಾಟೆಗೆ ತಗೆದುಕೊಂಡರು. ಸ್ಥಳದಲ್ಲಿದ್ದ ಪೊಲೀಸರು ಮಧ್ಯೆ ಪ್ರವೇಶಿಸಿ ಗಲಾಟೆ ತಣ್ಣಗಾಗಿಸಿದರು.

ಅಭಿವೃದ್ಧಿಯೇ ಮೊದಲ ಗುರಿ: ಮರಿಯಮ್ಮನಹಳ್ಳಿ: 2013 ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ಮರಿಯಮ್ಮನಹಳ್ಳಿ ಜನತೆ ಅಧಿಕ ಮತ ನೀಡಿ ನನ್ನ ಗೆಲ್ಲಿಸಿದ್ದು, ಪಟ್ಟಣದ ಸರ್ವೋತುಭಿಮುಖ ಅಭಿವೃದ್ಧಿಯೇ ನನ್ನ ಗುರಿ ಎಂದು ಹಗರಿಬೊಮ್ಮನಹಳ್ಳಿ ಶಾಸಕ ಭೀಮನಾಯ್ಕ ಹೇಳಿದರು.

ಪಪಂ ಅಧ್ಯಕ್ಷ ಸ್ಥಾನದ ಚುನಾವಣೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಿಂದಿನ ಬಾರಿ ಇದ್ದ ಅಧ್ಯಕ್ಷರು ಅಭಿವೃದ್ಧಿ ಬಗ್ಗೆ ನಮ್ಮ ಬಳಿ ಯಾವುದೇ ಚರ್ಚೆ ನಡೆಸುತ್ತಿರಲಿಲ್ಲ. ಆದರೂ ಪಪಂಗೆ ಅಭಿವೃದ್ಧಿ ಕಾಮಗಾರಿ ನೀಡಿದ್ದೇನೆ. ಮೊದಲ ಬಾರಿಗೆ ಹೈಕ ಅನುದಾನ ಮರಿಯಮ್ಮನಹಳ್ಳಿ ಹೋಬಳಿಗೆ ಬಂದಿದ್ದು, ನಗರ ಪ್ರದೇಶ್ಕಕೆ 85 ಲಕ್ಷ ರೂ., ಗ್ರಾಮೀಣ ಭಾಗದ ಅಭಿವೃದ್ಧಿಗೆ 1.40 ಕೋಟಿ ರೂ. ನೀಡಲಾಗಿದೆ. ಈಗ ಪಪಂ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ಗೆ ಬಂದ ಮಾತ್ರಕ್ಕೆ ಕಾಂಗ್ರೆಸ್ ಸದಸ್ಯರಿಗಷ್ಟೆ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅಭಿವೃದ್ಧಿ ಅಂತ ಬಂದಾಗ ಪಟ್ಟಣದ 18 ಸದಸ್ಯರನ್ನೂ ವಿಶ್ವಾಸ ತೆಗೆದುಕೊಳ್ಳುವೆ ಎಂದರು.