ಬೆಳೆ ನಷ್ಟವಾದ ರೈತರಿಗೆ ಉಚಿತ ಬಿತ್ತನೆ ಬೀಜ

 

ಮರಿಯಮ್ಮನಹಳ್ಳಿ : ಈ ಭಾಗದಲ್ಲಿ ಮಳೆ ಇಲ್ಲದ ಕಾರಣ ವಿವಿಧೆಡೆ ಬೆಳೆ ನಷ್ಟವಾಗಿದೆ ಎಂದು ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಹೇಳಿದರು.

ಡಣಾಯಕನಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಒಣಗಿದ ಬೆಳೆ, ಚೆಕ್ ಡ್ಯಾಮ್, ನಾಲಾಬದು, ಕೊರಕಲು ತಡೆ, ಬದು ನಿರ್ಮಾಣ, ಕೃಷಿ ಹೊಂಡ, ಸಮಗ್ರ ಕೃಷಿ ಪದ್ಧತಿ ಕ್ಷೇತ್ರ ವೀಕ್ಷಣೆ ಮಾಡಿ ನಂತರ ಮಾತನಾಡಿದರು. ರಾಜ್ಯದಲ್ಲಿ 10 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಮುಂಗಾರು ಆರಂಭದಲ್ಲಿ ಬಿತ್ತನೆ ಮಾಡಿದರೂ ಸಕಾಲಕ್ಕೆ ಮಳೆಯಾಗದ್ದರಿಂದ ಅಲ್ಲಲ್ಲಿ ಬೆಳೆ ನಷ್ಟವಾಗಿದ್ದು, ಮತ್ತೆ ಬಿತ್ತನೆ ಮಾಡುವಂತೆ ಕೋರಲಾಗಿದೆ. ಅಲ್ಲದೇ ಬಿತ್ತನೆಗೆ ಉಚಿತವಾಗಿ ಬೀಜ ವಿತರಿಸಲು ನಿರ್ಧರಿಸಿದ್ದು, ಬೆಳೆ ನಷ್ಟ ಪ್ರದೇಶದ ವರದಿ ತರಿಸಿಕೊಳ್ಳಲಾಗುತ್ತಿದೆ. ಉಚಿತ ಬೀಜ ವಿತರಣೆಗೆ 10 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಜತೆಗೆ ರೈತರು ಮಿಶ್ರ ಬೆಳೆ ಬೆಳೆಯಬೇಕು. ಇದಕ್ಕೆ ಸರ್ಕಾರ ಸಂಪೂರ್ಣ ಪ್ರೋತ್ಸಾಹ ನೀಡಲಿದೆ ಎಂದು ತಿಳಿಸಿದರು.

ಕೃಷಿ ಭೂಮಿಯ ಕೊಳವೆಬಾವಿಗಳ ಅಂತರ್ಜಲ ಹೆಚ್ಚಿಸಲು ಜಲಾನಯನ ಇಲಾಖೆಯಡಿ ಚೆಕ್ ಡ್ಯಾಮ್, ನಾಲಾಬದು, ಕೊರಕಲು ತಡೆ, ಬದು ನಿರ್ಮಾಣ, ಗೋಕಟ್ಟೆ ಸೇರಿ ಹಲವು ಯೋಜನೆಗಳನ್ನು ರೂಪಿಸಿದ್ದು, ರೈತರು ಸದುಪಯೋಗ ಪಡಿಸಿಕೊಳ್ಳಬೇಕು. ವೈಜ್ಞಾನಿಕ ಬೆಳೆಗಳಿಗೆ ಒತ್ತು ನೀಡಬೇಕು ಎಂದರು.

ಜಿಪಂ ಉಪಾಧ್ಯಕ್ಷೆ ದೀನಾ ಮಂಜುನಾಥ, ಜಲಾನಯ ಇಲಾಖೆ ನಿರ್ದೇಶಕ, ಪದ್ಮಯ್ಯನಾಯ್ಕ, ಕೇಂದ್ರ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಮಚಂದ್ರಯ್ಯ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಂ.ಎಸ್.ದಿವಾಕರ್, ಉಪ ನಿರ್ದೇಶಕರಾದ ಎಲ್.ಸಿದ್ದೇಶ್ವರ್, ಮಂಜಳಾ, ಸಹಾಯಕ ನಿರ್ದೇಶಕ ವಾಮದೇವ, ಚಿದ್ರಿ ಸತೀಶ್, ಕೆಪಿಸಿಸಿ ಸದಸ್ಯ ಕೆ.ಶಿವಮೂರ್ತಿ ಇತರರಿದ್ದರು.